Tuesday, July 14, 2015

ಬಾಹುಬಲಿ  - ನಾ ನೋಡಿದ ಚಿತ್ರ


ಈ ಚಲನಚಿತ್ರ ನಿಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೊಂದು ಪರೀಕ್ಷೆ. ಎಲ್ಲಿಯ ತನಕ ನೀವು ನಿಮ್ಮ ರೋಮಗಳನ್ನು ನಿಮಿರಿಸಿ , ಕಣ್ಣು ಪಿಳಿಕಿಸದೆ,  ಉಸಿರು ಬಿಗಿ ಹಿಡಿದು ಕುಳಿತುಕೊಳ್ಳುವಿರಿ ಅನ್ನೋ ಪರೀಕ್ಷೆ ?? ಯಾಕೆಂದರೆ, ಮೊದಲಿನಿಂದ ಕೊನೆಯವರೆಗೂ ನಿಮ್ಮನ್ನು ಸೀಟಿಗೆ ಕಟ್ಟಿ , ನಿಮ್ಮ ಮೇಲೆ ವಶೀಕರಣ ಮಾಡಿ, ತನ್ನ ಪ್ರಭಾವವನ್ನು ಬೀರುತ್ತಾ ಹೋಗುತ್ತದೆ ಈ ಚಲನಚಿತ್ರ. ಕ್ಷಮಿಸಿ, ಬರೀ ಚಲನಚಿತ್ರವೆಂದರೆ ತಪ್ಪಾದೀತು,  ಇದೊಂದು ಸ್ಕ್ರೀನ್ ಮೇಲಿನ ವೈಭವದ ದೃಷ್ಯಕಾವ್ಯ, ಕುತೂಹಲದ ಎಲ್ಲೆ ಮೀರಿದ ಕಥನ. 'ಬಾಹುಬಲಿ' ಹಿಂದುಸ್ಥಾನದ ಸಿನಿಮಾಲೋಕದ ಹೊಸ ಅಧ್ಧೂರಿ ಅದ್ಭುತ.  ಎರಡು ಮುಕ್ಕಾಲು ಘಂಟೆಗಳಲ್ಲಿ ನಮ್ಮನ್ನು ತನ್ನ ಬಾಹುಗಳ ಮೇಲೆ ಕೊಂಡೊಯ್ಯುತ್ತಾ, ಹೊಸ ಲೋಕದಲ್ಲಿ ಸಂಚರಿಸುತ್ತಾನೆ ಈ ಬಾಹುಬಲಿ. ಅದಕ್ಕೆ ಇರಬೇಕು, ಸಿನಿಮಾ ಮುಗಿದ ಮೇಲೆ, ಅವನ ಮೇಲೆ ನಿಮಗೆ ಇನ್ನಿಲ್ಲದ ಪ್ರೀತಿ ಉಕ್ಕಿಬಂದು, ನಿಮ್ಮ ಮನಸ್ಸನ್ನು ಆಕ್ರಮಿಸಲು ಅವನಿಗೆ ನೀವು ಅವಕಾಶ ಕೊಡುವುದು. 
ಮೂರು ತಲೆಮಾರುಗಳ ಕಥಾಹಂದರಗಳ್ಳನ್ನೊಳಗೊಂಡ ಮಹಾಕಾವ್ಯದ ಮೊದಲ ಭಾಗವಿದು. ಕಥೆಯ ನಿರೂಪಣೆಯ ಮಾಯಾಜಾಲ ಒಂದು ಕಡೆಯಾದರೆ ಅದಕ್ಕೆ ಅನುಗುಣವಾಗಿ ತೆರೆಯ ಮೇಲೆ ತೆರೆಯುತ್ತಾ ಹೋಗುವ ವಿಸ್ಮಯದ ದೃಶ್ಯಗಳ ಮಾಯಾಲೋಕ, ಕಥೆಗೆ ಸಾಥಿಯಾಗಿ ನೋಡುಗರನ್ನು ಬೆರಗಾಗಿಸುತ್ತದೆ. ಬೆಟ್ಟದಿಂದ ಬೀಳುವ ನದಿಯಲ್ಲಿ ಸಿಕ್ಕ ಬಾಲಕನ ಪಾಲನೆ ಮಾಡುವ ಗಿರಿಜನ ಅಮ್ಮನಿಗೆ, ಅವನು ಬೆಳೆಯುತ್ತಾ ಬೆಟ್ಟದಿಂದಾಚೆ ಏನಿದೆ ಅಂತ ನೋಡುವ ಹುಚ್ಚುತನ ಬಿಡಿಸುವುದಕ್ಕೆ ಏನೆಲ್ಲಾ ಪ್ರಯತ್ನ ಮಾಡುತ್ತಾಳೆ, ಆದರೆ ಬೆಳೆಯುತ್ತಾ ಇವನ ಕುತೂಹಲ ಜಾಸ್ತಿಯಾಗಿ, ಒಂದು ದಿವಸ ಆ ರಹಸ್ಯಮಯವಾದ ಬೆಟ್ಟವನ್ನು ಹತ್ತಿಯೇ ಬಿಡುತ್ತಾನೆ. ಬೆಟ್ಟದಾಚೆ , ಅವನ್ನೋಳಗೊಂಡ ಒಂದು ಗೋಪ್ಯವಾದ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ, ಜೊತೆಗೆ ಇವನ ಪ್ರೀತಿಯ ಮೊಗ್ಗು, ಹೂವಾಗುತ್ತದೆ. ತಾನ್ಯಾರು , ನಾನ್ಯಾಕೆ ಬೆಟ್ಟದೆ ಕೆಳಗೆ ಬಂದೆ, ಮುಂದೆ ನಾನೇನು ಮಾಡಬೇಕು?? ಮುಂತಾದ ಪ್ರಶ್ನೆಗಳ ಉತ್ತರ ಹುಡುಕುತ್ತಾ ಹೋಗುವ ಬಾಹುಬಲಿ, ತನ್ನ ಬಾಹುಬಲಗಳಿಂದ ಹೇಗೆ ತನಗೆ ಪ್ರತಿರೋಧ ಒಡ್ಡುವ ಶಕ್ತಿಗಳನ್ನೆಲ್ಲಾ ಜಯಸುತ್ತಾನೆ ಅನ್ನುವುದು ಕಥೆಯ ಮುಖ್ಯ ತಿರುಳು, ಅದಕ್ಕೆ ಉಪಕಥೆಗಳು ಆವಶ್ಯಕ ಇದ್ದಲ್ಲಿ ಸೇರಿಕೊಂಡು ಕಥೆಯ ಬೆರಗನ್ನು ಹೆಚ್ಚಿಸಿವೆ.

ಹಾಲಿವುಡ್ ನ ಸ್ಪೇಷಲ್ ಇಪ್ಪೆಕ್ಟ್ಸ ಮೂವಿಗಳನ್ನು ಬಾಯಿಬಿಟ್ಟು ನೋಡುವ ನಮಗೆ ಅವನ್ನೆಲ್ಲ ಮೀರಿಸುವ 'ಬಾಹುಬಲಿ' ಇಷ್ಟವಾಗತೊಡಗುತ್ತಾನೆ. ಸೂಪರ್-ಮ್ಯಾನ , ಸ್ಪೈಡರ್ ಮ್ಯಾನ ಗುಂಗಿನಲ್ಲಿರುವ ನನ್ನ ಮಗ, ಇದನ್ನು ನೋಡಿ, 'ಬಾಹುಬಲಿ' ಇದುವರೆಗೂ ಎಲ್ಲಿದ್ದ ಆಪ್ಪಾ? ನನಗೆ ಬಾಹುಬಲಿ ಟಾಯ್ಸ್ ಬೇಕು? ಅಂತ ಮೂವಿ ಮುಗಿದ ಮೇಲೆ ನನಗೆ ದುಂಬಾಲು ಬಿದ್ದಿದ್ದು ನೋಡಿ, ಇದು ಹೇಗೆ ಇಂದಿನ ಪೀಳಿಗೆಯ ಹುಡುಗರಿಂದ ಹಳೆ ತಲೆಮಾರಿನ ವೃದ್ಧರಿಗೆ ಮೋಡಿಮಾಡಿದೆ ಅಂತ ಆಶ್ಚರ್ಯ ಪಟ್ಟೆ.

ರಾಜನೀತಿ ಶಾಸ್ತ್ರ, ಯುದ್ಧ ಕೌಶುಲ, ನ್ಯಾಯ ಪರತೆ, ಪ್ರೇಮದ ಚೆಲುವು, ಭಕ್ತಿಯ ಭಾವ....... ಹೀಗೆ ಎಲ್ಲದರ ನಿದರ್ಶನ ನೀಡುವ 'ಬಾಹುಬಲಿ', ನಿರ್ದೇಶಕ ರಾಜಮೌಳಿಯವರ ಮಾಸ್ಟರ್-ಪೀಸ್. ಸಣ್ಣ ಸಣ್ನ ವಿಷಯಗಳಿಗೆ ಅವರು ನೀಡಿದ ಗಮನ, ಕಲಾವಿದರ ಪೋಷಾಕು, ವೈಬವಪೂರಿತ ರಾಜಧಾನಿ.......ಎಲ್ಲವೂ ಶ್ಲಾಘನೆಗೆ ಯೋಗ್ಯವಾದವುಗಳು .

ಟಿಕೆಟ್ ಸಿಕ್ಕಿಲ್ಲಾ ಅಂತ ಬೇಜಾರುಮಾಡ್ಕೋಬೇಡಿ, ಜಾತ್ರೆ ಸ್ವಲ್ಪ ತಣ್ಣಗಾದನಂತರ, ನೀವೂ , ನಿಮ್ಮ ಮನೆಯಲ್ಲಿರುವವರೆಲ್ಲರನ್ನೂ ಈ ವಿಸ್ಮಯಕ್ಕೆ ಕರೆದುಕೊಂಡು ಹೋಗಿ. 

No comments:

Post a Comment