Sunday, July 19, 2015

ರಂಗತಿರಂಗ....

ಈ ಚಲನಚಿತ್ರ ನೋಡುವವರಿಗೆ ಒಂದು ಸೂಚನೆ. ಚಿತ್ರವನ್ನು ನೋಡುತ್ತ ಯಾವುದೋ ಫೋನ ಕರೆಗೋ ಇಲ್ಲಾ ಪ್ರಕೃತಿ ಕರೆಗೋ ನೀವು ಒಂದೈದು ನಿಮಿಷ ಹೊರಗೆ ಹೋಗಿ ಬಂದರೆ, ಮತ್ತೇ ಚಿತ್ರಕಥೆಗೆ ಹೊಂದಿಕೊಳ್ಳುವುದು ಬಲು ಕಷ್ಟ, ಯಾಕೆಂದರೆ ಕ್ಷಣ-ಕ್ಷಣಕ್ಕೂ ಊಹಿಸಲಾಗದಂತ ತಿರುವುಗಳಿಂದ ನೋಡುಗನನ್ನು ತನ್ನ ಸುಳಿಯಲ್ಲಿ ಬಂಧಿಸುತ್ತಾ ಸಾಗುತ್ತದೆ ಕಥೆ. ನನಗೂ ಸೀಟಿನಿಂದ ಏಳದೇ , ಕಣ್ಣು ಮತ್ತು ಮಿದುಳಿಗೆ ಕಸರತ್ತು ಕೊಡುತ್ತಾ ಕಥೆಯ ಜಾಡಿಗೆ ಹೊಂದುತ್ತಾ ಹೋಗುವ ಒತ್ತಡ ನಿರ್ಮಾಣವಾಗಿ, ಬೇರೆಲ್ಲ ಒತ್ತಡಗಳನ್ನು ತಾತ್ಕಾಲಿಕವಾಗಿ ಹಿಡಿತದಲ್ಲಿಟ್ಟುಕೊಳ್ಳುವ ಮನಸ್ಥಿತಿ ಉದ್ಭವವಾಯಿತು. ಮೊದಮೊದಲು ಕಥೆಯು ನೋಡುಗನನ್ನು ಗೊಂದಲಕ್ಕೀಡು ಮಾಡಿ ಸಾಗಿದರೂ, ಬರಬರುತ್ತಾ ಕಥೆಯ ಎಳೆಗಳು ಒಂದೊಂದಾಗಿ ಬಿಚ್ಚಿ, ಈ ಗೊಂದಲವನ್ನು ದೂರ ಮಾಡಿ, 'ಓಹ್'...'ಅಬ್ಬಾ...' 'ಹೀಗೂ ಉಂಟೇ?' ಅನ್ನೋ ಆಶ್ಚರ್ಯ ಉವಾಚಗಳನ್ನು ತನಗರಿವಿಲ್ಲದೇ ಧಾರಾಳವಾಗಿ ಹೊರಹೊಮ್ಮುವಂತೆ ಮಾಡಿ ಚಿತ್ರ ಮುಕ್ತಾಯವಾಗುತ್ತದೆ, ಅದರ ನಂತರ ನಿಮ್ಮ ಬೇರೆ ಒತ್ತಡಗಳತ್ತ ಗಮನ ಹರಿಸಬಹುದು. ರಾತ್ರಿ ಮಲಗುವ ಮುನ್ನ ಕಥೆ ಮತ್ತೇ ಕನಸಿನಲ್ಲಿ ಸುಳಿಯತೊಡಗುತ್ತ, ನಿಮ್ಮನ್ನು ಕಾಡತೊಡಗುತ್ತದೆ.

ಈ ಚಿತ್ರದಲ್ಲಿ ಎಲ್ಲಾ ಹೊಸಬರೇ ಅನ್ನೋ ಅಂಶ ಗಮನಿಸತಕ್ಕದ್ದು. ಈ ಇಂಡಸ್ಟ್ರಿಯಲ್ಲಿ ಪಳಗಿದವರಂತೆ ಯಾವ ಸಸ್ಪೆನ್ಸ ಥ್ರಿಲ್ಲರ್ ಗೂ ಕಡಿಮೆಯಿಲ್ಲದ ಅದ್ಭುತವಾದ ಸಿನಿಮಾ ಒಂದನ್ನು ನಮ್ಮ ಮುಂದಿಟ್ಟಿದ್ದಾರೆ. ಕಥೆಯ ನಿರೂಪಣೆ, ಅದಕ್ಕೆ ಬೇಕಾದ ಹಿನ್ನೆಲೆ ಮತ್ತು ಬಾಷೆ, ಸ್ಥಳ, ಕಲಾಕಾರರನ್ನು ಸಮಯ ಸಂದರ್ಭಾನುಸಾರವಾಗಿ ಬಳಿಸುತ್ತ ತೆರೆಯ ಮೇಲೆ ಕುತೂಹಲಬರಿತ ರಹಸ್ಯವೊಂದನ್ನು ಸೃಷ್ಟಿಸಿದ್ದಾರೆ.

ಅಜ್ಞಾತವಾಸದಲ್ಲಿ ಜೀವಿಸುತ್ತಿರುವ ಒಬ್ಬ ಕತೆಗಾರ, ಮತ್ತು ಆವಾಗಾವಾಗ ವಿಚಿತ್ರ ಕನಸೊಂದನ್ನು ಕಾಣುತ್ತ ಬೆಚ್ಚಿ ಬೀಳುವ ಅವನ ಗರ್ಬಿಣಿ ಹೆಂಡತಿ,  ಇಬ್ಬರೂ ಹೆಂಡತಿ ಕಡೆಯ ಪೂರ್ವಿಕರು ಮೊದಲು ಮಾಡುತ್ತಿದ್ದ , ಹಲವಾರು ವರ್ಷಗಳಿಂದ ಮಾಡದೇ ನಿಲ್ಲಿಸಿದ ,ಭೂತಾರಾಧನೆಯನ್ನು ಮಾಡಲು 'ಕಮರೊಟ್ಟು' ಅನ್ನುವ ದಕ್ಷಿಣ ಕನ್ನಡದ ಕುಗ್ರಾಮದ ಹಳೇ ಮನೆಗೆ ಬರುತ್ತಾರೆ. ಈ ಊರೆ ಒಂದು ನಿಗೂಢವಾಗಿದ್ದರೆ, ಇಲ್ಲಿರುವ ಜನರೂ ವಿಚಿತ್ರ. ಈ ವಿಚಿತ್ರದಲ್ಲಿ ಇವರಿಬ್ಬರು ಭಾಗಿಯಾಗಿ ಕೊನೆಗೆ ಇದರ ಮೂಲವನ್ನು ಕಂಡುಹಿಡಿಯುತ್ತಾರೆ.

ಈ ಅಜ್ಞಾತ ಅನಾಮಧೇಯ  ಲೇಖನನ ಜಾಡನ್ನು ಅರಿಯಲಿಕ್ಕೆ ಇವನ ಹಿಂದೆ ಬಿದ್ದ ಪತ್ರಕರ್ತೆಯೊಬ್ಬಳು, ಇದೆ ಗ್ರಾಮಕ್ಕೆ ಬರುತ್ತಾಳೆ. ಇವರನ್ನೆಲ್ಲರನ್ನು ಒಳಗೊಂಡ ರಹಸ್ಯವೊಂದು ಹಂತ ಹಂತವಾಗಿ ತೆರೆಯ ಮೇಲೆ ಬತ್ತಲಾಗುತ್ತ ಹೋಗುತ್ತದೆ.

ಕೆಲವೊಂದು ಹಾಡುಗಳು ಅನವಶ್ಯಕವೆನಿಸಿದರೂ, ಅದರಲ್ಲಿರುವ ಸಾಹಿತ್ಯ ಉತ್ತಮವಾಗಿದೆ. ಇಂಗ್ಲಿಷ್ ಇಲ್ಲಾ ಕಂಗ್ಲೀಷ ನ ಕಲಬೆರಕೆ ಇರದ ಶುದ್ಧ ಕಸ್ತೂರಿ ಕನ್ನಡದ ಬಳಕೆ ಇದೆ.

ನಿರ್ದೇಶಕ ಅನುಪ ಭಂಡಾರಿ , ತಮ್ಮ ಚೊಚ್ಚಲ ಪ್ರಯೋಗದಲ್ಲಿ ಗೆದ್ದಿದ್ದಾರೆ. ಈ ರೀತಿಯ ಪಕ್ಕಾ ಒರಿಜಿನಲ್ ಉತ್ತಮ ಕನ್ನಡ ಚಿತ್ರಗಳ ಬರಗಾಲವಿದ್ದ ಸಂದರ್ಭದಲ್ಲಿ ಇದೊಂದು ಓಯಸಿಸ್ ತರ ಕನ್ನಡ ಚಿತ್ರ ರಸಿಕರನ್ನು ತನ್ನತ್ತ ಸೆಳೆಯುತ್ತಿದೆ. ಹೊಸ ನಟ ನಟಿಯರ ನಟನೆ ಚೆನ್ನಾಗಿದೆ, ಆದರೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗುವ ಆಸ್ಪದವಿದೆ.

ಚಿತ್ರ ಮುಗಿದರೂ ಮನಸ್ಸಿನಲ್ಲಿ ಕೆಲವೊಂದು ಪ್ರಶ್ನೆಗಳು ಉಳಿಯಬಹುದು, ಹಾಗಿದ್ದರೆ ಚಿತ್ರಮಂದಿರಕ್ಕೆ ಇನ್ನೊಂದು ಭೇಟಿ ಖಚಿತ ಮಾಡಿಕೊಳ್ಳಿ.

Tuesday, July 14, 2015

ಬಾಹುಬಲಿ  - ನಾ ನೋಡಿದ ಚಿತ್ರ


ಈ ಚಲನಚಿತ್ರ ನಿಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೊಂದು ಪರೀಕ್ಷೆ. ಎಲ್ಲಿಯ ತನಕ ನೀವು ನಿಮ್ಮ ರೋಮಗಳನ್ನು ನಿಮಿರಿಸಿ , ಕಣ್ಣು ಪಿಳಿಕಿಸದೆ,  ಉಸಿರು ಬಿಗಿ ಹಿಡಿದು ಕುಳಿತುಕೊಳ್ಳುವಿರಿ ಅನ್ನೋ ಪರೀಕ್ಷೆ ?? ಯಾಕೆಂದರೆ, ಮೊದಲಿನಿಂದ ಕೊನೆಯವರೆಗೂ ನಿಮ್ಮನ್ನು ಸೀಟಿಗೆ ಕಟ್ಟಿ , ನಿಮ್ಮ ಮೇಲೆ ವಶೀಕರಣ ಮಾಡಿ, ತನ್ನ ಪ್ರಭಾವವನ್ನು ಬೀರುತ್ತಾ ಹೋಗುತ್ತದೆ ಈ ಚಲನಚಿತ್ರ. ಕ್ಷಮಿಸಿ, ಬರೀ ಚಲನಚಿತ್ರವೆಂದರೆ ತಪ್ಪಾದೀತು,  ಇದೊಂದು ಸ್ಕ್ರೀನ್ ಮೇಲಿನ ವೈಭವದ ದೃಷ್ಯಕಾವ್ಯ, ಕುತೂಹಲದ ಎಲ್ಲೆ ಮೀರಿದ ಕಥನ. 'ಬಾಹುಬಲಿ' ಹಿಂದುಸ್ಥಾನದ ಸಿನಿಮಾಲೋಕದ ಹೊಸ ಅಧ್ಧೂರಿ ಅದ್ಭುತ.  ಎರಡು ಮುಕ್ಕಾಲು ಘಂಟೆಗಳಲ್ಲಿ ನಮ್ಮನ್ನು ತನ್ನ ಬಾಹುಗಳ ಮೇಲೆ ಕೊಂಡೊಯ್ಯುತ್ತಾ, ಹೊಸ ಲೋಕದಲ್ಲಿ ಸಂಚರಿಸುತ್ತಾನೆ ಈ ಬಾಹುಬಲಿ. ಅದಕ್ಕೆ ಇರಬೇಕು, ಸಿನಿಮಾ ಮುಗಿದ ಮೇಲೆ, ಅವನ ಮೇಲೆ ನಿಮಗೆ ಇನ್ನಿಲ್ಲದ ಪ್ರೀತಿ ಉಕ್ಕಿಬಂದು, ನಿಮ್ಮ ಮನಸ್ಸನ್ನು ಆಕ್ರಮಿಸಲು ಅವನಿಗೆ ನೀವು ಅವಕಾಶ ಕೊಡುವುದು. 
ಮೂರು ತಲೆಮಾರುಗಳ ಕಥಾಹಂದರಗಳ್ಳನ್ನೊಳಗೊಂಡ ಮಹಾಕಾವ್ಯದ ಮೊದಲ ಭಾಗವಿದು. ಕಥೆಯ ನಿರೂಪಣೆಯ ಮಾಯಾಜಾಲ ಒಂದು ಕಡೆಯಾದರೆ ಅದಕ್ಕೆ ಅನುಗುಣವಾಗಿ ತೆರೆಯ ಮೇಲೆ ತೆರೆಯುತ್ತಾ ಹೋಗುವ ವಿಸ್ಮಯದ ದೃಶ್ಯಗಳ ಮಾಯಾಲೋಕ, ಕಥೆಗೆ ಸಾಥಿಯಾಗಿ ನೋಡುಗರನ್ನು ಬೆರಗಾಗಿಸುತ್ತದೆ. ಬೆಟ್ಟದಿಂದ ಬೀಳುವ ನದಿಯಲ್ಲಿ ಸಿಕ್ಕ ಬಾಲಕನ ಪಾಲನೆ ಮಾಡುವ ಗಿರಿಜನ ಅಮ್ಮನಿಗೆ, ಅವನು ಬೆಳೆಯುತ್ತಾ ಬೆಟ್ಟದಿಂದಾಚೆ ಏನಿದೆ ಅಂತ ನೋಡುವ ಹುಚ್ಚುತನ ಬಿಡಿಸುವುದಕ್ಕೆ ಏನೆಲ್ಲಾ ಪ್ರಯತ್ನ ಮಾಡುತ್ತಾಳೆ, ಆದರೆ ಬೆಳೆಯುತ್ತಾ ಇವನ ಕುತೂಹಲ ಜಾಸ್ತಿಯಾಗಿ, ಒಂದು ದಿವಸ ಆ ರಹಸ್ಯಮಯವಾದ ಬೆಟ್ಟವನ್ನು ಹತ್ತಿಯೇ ಬಿಡುತ್ತಾನೆ. ಬೆಟ್ಟದಾಚೆ , ಅವನ್ನೋಳಗೊಂಡ ಒಂದು ಗೋಪ್ಯವಾದ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ, ಜೊತೆಗೆ ಇವನ ಪ್ರೀತಿಯ ಮೊಗ್ಗು, ಹೂವಾಗುತ್ತದೆ. ತಾನ್ಯಾರು , ನಾನ್ಯಾಕೆ ಬೆಟ್ಟದೆ ಕೆಳಗೆ ಬಂದೆ, ಮುಂದೆ ನಾನೇನು ಮಾಡಬೇಕು?? ಮುಂತಾದ ಪ್ರಶ್ನೆಗಳ ಉತ್ತರ ಹುಡುಕುತ್ತಾ ಹೋಗುವ ಬಾಹುಬಲಿ, ತನ್ನ ಬಾಹುಬಲಗಳಿಂದ ಹೇಗೆ ತನಗೆ ಪ್ರತಿರೋಧ ಒಡ್ಡುವ ಶಕ್ತಿಗಳನ್ನೆಲ್ಲಾ ಜಯಸುತ್ತಾನೆ ಅನ್ನುವುದು ಕಥೆಯ ಮುಖ್ಯ ತಿರುಳು, ಅದಕ್ಕೆ ಉಪಕಥೆಗಳು ಆವಶ್ಯಕ ಇದ್ದಲ್ಲಿ ಸೇರಿಕೊಂಡು ಕಥೆಯ ಬೆರಗನ್ನು ಹೆಚ್ಚಿಸಿವೆ.

ಹಾಲಿವುಡ್ ನ ಸ್ಪೇಷಲ್ ಇಪ್ಪೆಕ್ಟ್ಸ ಮೂವಿಗಳನ್ನು ಬಾಯಿಬಿಟ್ಟು ನೋಡುವ ನಮಗೆ ಅವನ್ನೆಲ್ಲ ಮೀರಿಸುವ 'ಬಾಹುಬಲಿ' ಇಷ್ಟವಾಗತೊಡಗುತ್ತಾನೆ. ಸೂಪರ್-ಮ್ಯಾನ , ಸ್ಪೈಡರ್ ಮ್ಯಾನ ಗುಂಗಿನಲ್ಲಿರುವ ನನ್ನ ಮಗ, ಇದನ್ನು ನೋಡಿ, 'ಬಾಹುಬಲಿ' ಇದುವರೆಗೂ ಎಲ್ಲಿದ್ದ ಆಪ್ಪಾ? ನನಗೆ ಬಾಹುಬಲಿ ಟಾಯ್ಸ್ ಬೇಕು? ಅಂತ ಮೂವಿ ಮುಗಿದ ಮೇಲೆ ನನಗೆ ದುಂಬಾಲು ಬಿದ್ದಿದ್ದು ನೋಡಿ, ಇದು ಹೇಗೆ ಇಂದಿನ ಪೀಳಿಗೆಯ ಹುಡುಗರಿಂದ ಹಳೆ ತಲೆಮಾರಿನ ವೃದ್ಧರಿಗೆ ಮೋಡಿಮಾಡಿದೆ ಅಂತ ಆಶ್ಚರ್ಯ ಪಟ್ಟೆ.

ರಾಜನೀತಿ ಶಾಸ್ತ್ರ, ಯುದ್ಧ ಕೌಶುಲ, ನ್ಯಾಯ ಪರತೆ, ಪ್ರೇಮದ ಚೆಲುವು, ಭಕ್ತಿಯ ಭಾವ....... ಹೀಗೆ ಎಲ್ಲದರ ನಿದರ್ಶನ ನೀಡುವ 'ಬಾಹುಬಲಿ', ನಿರ್ದೇಶಕ ರಾಜಮೌಳಿಯವರ ಮಾಸ್ಟರ್-ಪೀಸ್. ಸಣ್ಣ ಸಣ್ನ ವಿಷಯಗಳಿಗೆ ಅವರು ನೀಡಿದ ಗಮನ, ಕಲಾವಿದರ ಪೋಷಾಕು, ವೈಬವಪೂರಿತ ರಾಜಧಾನಿ.......ಎಲ್ಲವೂ ಶ್ಲಾಘನೆಗೆ ಯೋಗ್ಯವಾದವುಗಳು .

ಟಿಕೆಟ್ ಸಿಕ್ಕಿಲ್ಲಾ ಅಂತ ಬೇಜಾರುಮಾಡ್ಕೋಬೇಡಿ, ಜಾತ್ರೆ ಸ್ವಲ್ಪ ತಣ್ಣಗಾದನಂತರ, ನೀವೂ , ನಿಮ್ಮ ಮನೆಯಲ್ಲಿರುವವರೆಲ್ಲರನ್ನೂ ಈ ವಿಸ್ಮಯಕ್ಕೆ ಕರೆದುಕೊಂಡು ಹೋಗಿ.