Tuesday, January 2, 2024

ಮೊಬೈಲಿಲ್ಲದ ಮುಂಜಾನೆ!

 ಮೊಬೈಲಿಲ್ಲದ ಮುಂಜಾನೆ!


"ಲೆಟ್ಸ್ ಪ್ಲೆ ಅ ಗೇಮ್ !"


ಎಡಕಲ್ಲ ಗುಡ್ಡದ ಕೆಳಗಿನ ನಮ್ಮ ಫೇವರೇಟ್ ಅಡ್ಡಾ - ಕೆರೆಯ ದಡದ ಮೆಟ್ಟಲುಗಳ ಮೇಲೆ ಕುಳಿತು, ನನ್ನ ಎರಡು ಮಗಳಿಂದರನ್ನು ನೋಡುತ್ತಾ ಹೇಳಿದೆ. ಪ್ರಕೃತಿ ಸದೃಶ್ಯ ರಮ್ಯ ರಮಣೀಯ ದೃಶ್ಯಾವಳಿ ನೋಡುವದರ ಬದಲು ನಮ್ಮಪ್ಪ ಯಾವುದೋ ಗೇಮ್ ಆಡಲು ಕರೆಯುತ್ತಿದ್ದಾನೆಂದು ಅವರಿಗೆ ಸ್ವಲ್ಪ ಕಸಿವಿಸಿ ಆದರೂ ಕುತೂಹಲಕ್ಕೆ ತಲೆಯಾಡಿಸಿದರು.

ಸಿಂಪಲ್ ಗೇಮ್ - ನಮಗೆ ಕಾಣುವ, ನಮ್ಮ ಕಣ್ಣೆದೆರಿಗಿರುವ ಒಂದೊಂದು ವಸ್ತು ಅಥವಾ ಜೀವಿಗಳ ಹೆಸರನ್ನ ಒಬ್ಬೋಬ್ಬರಾಗಿ ಹೇಳಬೇಕು, ರಿಪೀಟ್ ಮಾಡಬಾರದು. ಯಾರು ಕೊನೆಯವರೆಗೆ ಉಳಿದು, ಅಧಿಕತಮ ವಸ್ತು/ಜೀವಿಗಳ ಹೆಸರುಗಳನ್ನ ಹೇಳುತ್ತಾರೋ ಅವರು ವಿನ್ನರ್. ಗೇಮ್ ಶುರುವಾಯಿತು. ಇತ್ತ ನಮ್ಮ ಬೆನ್ನ ಹಿಂದೆ ಸೂರ್ಯೋದಯವಾಗುತ್ತಲಿತ್ತು.


'ಗುಡ್ಡ'
'ಗುಡ್ಡದ ಸುತ್ತಲಿನ ಮರಗಳು'

'ಕೊಕನಟ್ ಟ್ರೀ' ( ನನ್ನ ಸಣ್ಣ ಮಗಳ ಏಂಟ್ರಿ)
'ಹಳದಿ ಬಣ್ಣದ ಹೂಗಳು'
'ನೀಲಾಕಾಶ'
'ಬಿಗ್ ರಾಕ್ಸ್'

'ನೀರು - ಮುಂದಿರುವ ತಿಳಿನೀರಿನ ಕೆರೆ'
'ಸ್ಟೆಪ್ಸ್'- ನಾವು ಕೂತಿರುವ ಮೆಟ್ಟಿಲುಗಳು

'ಆಕಾಶದಲ್ಲಿ ಹಾರಾಡುತ್ತಿರುವ ಹಕ್ಕಿಗಳು'


ನಮ್ಮ ಗೇಮ್ ಗೆ ಈಗ ತಾತ್ಕಾಲಿಕ ತಡೆ ಬಂದಿತು, ಕಣ್ಮುಂದೆ ಕಾಣುವ ಎಲ್ಲವನ್ನೂ ಹೆಸರಿಸಿ ಆಯಿತಲ್ಲ, ಮತ್ತೇನು ಉಳಿದಿದೆ?





'ಅಲ್ಗೆ (ಪಾಚಿ)' - ನನ್ನ ಹತ್ತು ವಯಸ್ಸಿನ ಹಿರಿ ಮಗಳು ವಿಹಾನಾ ಗೇಮ್ ಮುಂದುವರೆಸಿದಳು,
'ಬಳ್ಳಿ' - ಕೆಲ ಮರಗಳಿಗೆ ಸುತ್ತಿ ಗಗನಕ್ಕೆ ಚಿಮ್ಮುವ ಬಳ್ಳಿಗಳನ್ನ ತೋರುತ್ತ ನಾನು ಹೇಳಿದೆ,
'ಗ್ರಾಸ್ - ಹುಲ್ಲು' ನನ್ನ ನಾಲ್ಕೂವರೆ ವಯಸ್ಸಿನ ಸಣ್ಣ ಮಗಳು ರಿಷಿತಾ ಹೇಳಿದಳು.


ಗೇಮ್ ಈಗ ಕುತೂಹಲವಾಗತೊಡಗಿತು, ಕೆಲವೊಂದು ಅನಿರೀಕ್ಷಿತ ವಿಸ್ಮಯಗಳು ಅನಾವರಣಗೊಳ್ಳತೊಡಗಿದವು.


'ರೆಪ್ಲೆಕ್ಷನ್ಸ್' .......'ರೆಪ್ಲೆಕ್ಷನ್ಸ್' ಅಪ್ಪಾ.....ಅಂತ ವಿಹಾನಾ ಕುತೂಹಲ ಕಣ್ಣುಗಳಿಂದ ನನ್ನತ್ತ ನೋಡಿ ಹೇಳಿದಳು. ನೋಡು ನೀರಿನ ಮೇಲೆ ನೋಡು, ಗುಡ್ಡ ಮತ್ತು ಅದರ ಮೇಲೀರುವ ಗಿಡಗಳ ಪ್ರತಿಬಿಂಬ ನೀರಿನ ಮೇಲೆ ಕಾಣಿಸ್ತಿದೆ. ನಾನು ತಲೆಯಾಡಿಸಿದೆ.
'ಫಾಗ್ - ಮುಂಜಾನೆ ಮಂಜು' ....ಅದಕ್ಕೇ ಗುಡ್ಡ ಅಷ್ಟು ಕ್ಲಿಯರ್ ಆಗಿ ಕಾಣಿಸ್ತಿಲ್ಲ ಅಂತ ನಾನೆಂದೆ.
'ಆಂಟ್ಸ್' - ನಾವು ಕುಳಿತ್ತಿದ್ದ ಮೇಟ್ಟಲಿನ ಮುಂದಿನ ಮೆಟ್ಟಲಿನ ಮೇಲಿನ ಇರುವೆಗಳ ಸಾಲನ್ನ ನೋಡುತ್ತ ರಿಷಿತ್ತಾ ಹೇಳಿದಳು.


ಗೇಮ್ ಮುಂದುವರೆಯತೊಡಗಿತು. ಮಗಳಿಬ್ಬರೂ ಎಲ್ಲಾ ದಿಕ್ಕಿನತ್ತ ಕಣ್ಣಾಹಿಸಿ ನೋಡಿ ಏನೇನೋ ಗ್ರಹಿಸುತ್ತಿದ್ದರು.

'ಪೊಲ್ಲುಶನ್' ..... ಸ್ವಲ್ಪ ದೂರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿ ತೋರಿಸಿ ಹಿರಿ ಮಗಳು ಹೇಳಿದಳು.
ನನ್ನ ಬತ್ತಳಿಕೆಯಲ್ಲಿದ್ದ ಬಾಣಗಳೆಲ್ಲ ಮುಗಿದಿದ್ದವು, ಅದಕ್ಕೆ ಸುಮ್ಮನಿದ್ದೆ.
'ಸನ್-ಸೂರ್ಯ' ಅಂತ ರಿಷಿತಾ ಹಿಂದೆ ಹೊರಳಿ ಹೇಳಿದಳು.
'ಸನ್ ರೇಯ್ಸ್' ಅಂತ ವಿಹಾನ ಗೇಮ್ ಮುಂದುವರೆಸಿದಳು. ಸೂರ್ಯರಷ್ಮಿಗಳು ಈಗ ನಮ್ಮ ಮೇಲೆ ಬಿದ್ದು, ಮುಂಜಾವಿನ ಚಳಿಯ ಅರ್ಭಟವನ್ನ ಸ್ವಲ್ಪ ಕಮ್ಮಿ ಮಾಡಿದ್ದವು.

ಮುಂಜಾವಿನ ಮಂಜು ಕರಗಿ ಈಗ ತಿಳಿನೀರಿನ ಕೆರೆ ಸ್ಪಷ್ಟವಾಗಿ ಕಾಣತೊಡಗಿತ್ತು.

'ಮೀನುಗಳು' - ದಡದ ಹತ್ತಿರದಲ್ಲಿ ಕಾಣುತ್ತಿದ್ದ ಕೆಲವು ಸಣ್ಣ ಮೀನುಗಳನ್ನು ತೋರುತ್ತ ಮತ್ತೇ ನಾನು ಗೇಮ್ ನಲ್ಲಿ ವಾಪಾಸಾದೆ.
'ಟ್ಯಾಡ್-ಪೋಲ್ಸ್ '- ಬಾಲಗಳುಳ್ಳ ಕಪ್ಪೆಗಳನ್ನ ತೋರುತ್ತ ವಿಹಾನ ಹೇಳಿದಳು
'ಗಣಪತಿ' ಅಂತ ಕೊನೆ ಮಗಳು ಕೆರೆಯನ್ನ ತೋರಿಸುತ್ತ ಹೇಳಿದಲು.

'ಗಣಪತಿ'!? ..... ಎಲ್ಲಿ ... ನಾನು ಕೇಳಿದೆ.

'ಗಣಪತಿ' ನಾವು ಇಲ್ಲೇ ತಾನೆ ಮನೆಗೆ ಕಳಿಸಿದ್ದು ? ನೀನೇ ಹೇಳಿದ್ಯಲ್ಲಾ......ಇಲ್ಲಿಂದ ಗಣಪತಿ ನೇರವಾಗಿ ಕೈಲಾಸಕ್ಕೆ , ಮನೆಗೆ ಹೋಗುತ್ತಾನೆಂದು, ಅಂತ ವಿಹಾನಾ ಗಣಪತಿ ವಿಸರ್ಜನೆ ನೆನಪಿಸಿಕೊಂಡು ಹೇಳಿದಳು. ಅಷ್ಟರಲ್ಲಿ -

'ಆರ್ ಯು ದೇರ್ ಗಣಪತಿ? ಆಯ್ ಲವ್ ಯು ಗಣಪತಿ, ಕಮ್ ಅಪ್' ಅಂತ ಕೊನೆ ಮಗಳು ಉದ್ಘಾರ ತಗೆದಳು, ಅದಕ್ಕೆ ಹಿರಿ ಮಗಳು ರಾಗ ಸೇರಿಸಿದಳು. ನಾನು ಮನಸಲ್ಲೇ ಗಜಾನನನ್ನ ನೆನಸಿಕೊಂಡೆ. ಅಷ್ಟರಲ್ಲಿ ಬಾನಲ್ಲಿ ಹಾರಾಡುತ್ತಿದ್ದ ಕಪ್ಪಗಿನ ಹಕ್ಕಿಯೊಂದು ಕೆರೆಯ ನೀರಿನ ಮೇಲೆ ಲ್ಯಾಂಡ್ ಆಗಿ ಈಜಾಡತೊಡಗಿತು, ನೋಡತ್ತಿದ್ದಂತೆ ಕೊಕ್ಕು-ಕತ್ತನ್ನು ನೀರಲ್ಲಿ ಮುಳುಗಿಸಿ , ನೀರಲ್ಲಿ ಮಾಯವಾಯಿತು. ಗಣಪತಿಯ ನೆನಪಲ್ಲಿದ್ದ ಭಕ್ತೆಯರು ಮತ್ತೇ ಗೇಮನಲ್ಲಿ ವಾಪಸಾದರು.

'A bird which can fly , as well smim also, and then dive inside the water' ಅಂತ ಹಿರಿಮಗಳು ಹೇಳಿದಳು.


ಅದರ ಹೆಸರು 'Cormorant' ನೀರು ಕಾಗೆ ಅನ್ನುತ್ತಾರೆ ಅಂತ ನಾನಂದೆ. ಎಲ್ಲರೂ ಅದು ಒಂದು ಕಡೆ ಮುಳುಗಿ ಬೇರೆಕಡೆ ಪ್ರತ್ಯಕ್ಷವಾಗುದನ್ನ ವಿಸ್ಮಯದಿಂದ ನೋಡುತ್ತ, ಪ್ರತಿಯೊಂದುಸಾರಿ ಅದು ನೀರಲ್ಲಿ ಕಾಣೆಯಾದಾಗ, ಎಲ್ಲಿ ಪ್ರತ್ಯಕ್ಷವಾಗುಬಹುದೆಂಬ ಊಹಿಸುವ ಗೇಮ್ - ಉಪಪಂದ್ಯವಾಗಿ ಆಡತೊಡಗಿದೆವು. ಆ ನೀರು ಕಾಗೆ ನಮಗೆ ಚಳ್ಳೆಹಣ್ಣು ತಿನ್ನಿಸುತ್ತ ನಾವು ಊಹಿಸಲೂ ಸಾಧ್ಯವಾಗದಂತ ಸ್ಥಳದಿಂದ ಪ್ರತ್ಯಕ್ಷವಾಗುತ್ತಿತ್ತು.

'A Blue Bird' ಅಂತ ಕೊನೆಮಗಳು ಅನತಿ ದೂರದಲ್ಲಿ, ಕೆರಯಲ್ಲೇ ಇದ್ದ ಒಂದು ಕಲ್ಲಿನ ಮೇಲೆ ಕುಳಿತ 'kingfisher' ಹಕ್ಕಿಯನ್ನ ತೋರಿಸುತ್ತ ಹೇಳಿದಳು. ಕಿಂಗ್ ಪಿಶರ್ ಸಣ್ಣ ಸಣ್ಣ ಮೀನು ಹಿಡಿಯಲು ಪ್ರಯತ್ನ ಮಾಡುತ್ತಿತ್ತು.
ಹೆಸರು ಕಿಂಗ್-ಪಿಶರ್ ಅಂತ ಇದೆ ಆದರೂ ಅದಕ್ಕೆ ಮೀನು ಸಿಗುತ್ತಿಲ್ಲ ಅಂತ ಹಿರಿಮಗಳು ಬೇಸರಿಸಿದಳು. ಸೂರ್ಯ ಈಗ ಸ್ವಲ್ಪ ಮೇಲೆ ಬಂದಿದ್ದ. ಮನೆಗೆ ತಿರುಗಿ ಹೋಗುವ ಸಮಯವಾಗಿತ್ತು. ನಾನು ಇಬ್ಬರನ್ನೂ ಕೂತಲ್ಲಿಂದ ಎಬ್ಬಿಸಿದೆ.


ಗೇಮ್ ಇನ್ನೂ ಮುಗಿದಿಲ್ಲ ಅಪ್ಪಾ ... ಅಂತ ಹಿರಿಮಗಳು ಎದ್ದು ನಿಂತು ಹೇಳಿದಳು. ನಾನು ಮತ್ತೇನು ಹೇಳುತ್ತಾಳೆಂದು ಯೋಚಿಸತೊಡಗಿದೆ. ಅವಳು ಒಂದು ಸಣ್ಣ ಕಲ್ಲನ್ನು ತೆಗೆದುಕೊಂಡು ಪ್ರಶಾಂತವಾದ ಕೆರಯತ್ತ ಎಸೆದು -


'Waves' ಅಂತ ನಗುತ್ತಾ ಹೇಳಿದಳು.

ನೀನೇ   'ವಿನ್ನರ್'  ಅಂತ ನಾನಂದೆ.


ಸೋಲೊಪ್ಪದ ಕಿರಿಮಗಳು ಹೇಳಿದಳು - "ವಿಹಾನಾ ಕಲ್ಲು ತೂರಿದ್ದಾಳಲ್ಲ, ಅದು ಮಲಗಿದ್ದ ಗಣಪತಿಯನ್ನೆಬ್ಬಿಸಿ, ಗಣಪತಿ ಜಂಪ್ ಮಾಡಿ ಗುಡ್ಡದ ಮೇಲೆ ನಿಲ್ಲುತ್ತೆ" ಅಂತ ಮುಗ್ಧವಾಗಿ ಹೇಳಿದಾಗ, ನಾನು   'ನೀನು ದೊಡ್ಡ ವಿನ್ನರ್' ಅಂತ ಹೇಳಿ, ಗಣಪತಿ ಬೇರೆ ಊರಿಗೆ ಹೋಗಿದೆಯೆಂದು, ಬರಲು ತಡವಾಗುತ್ತೆ ಅಂತ ಸಮಜಾಯಿಷಿ ಕೊಟ್ಟು ಮನೆಗೆ ಕರೆದುಕೊಂಡು ಬಂದೆ. ಮನದಲ್ಲಿ ಕೆಳಗಿನ ಹೇಳಿಕೆ ನೆನಪಾಯಿತು -


"Spend your time in the company of geniuses, sages, children, and books." - Naval Ravikant .

Sunday, July 19, 2015

ರಂಗತಿರಂಗ....

ಈ ಚಲನಚಿತ್ರ ನೋಡುವವರಿಗೆ ಒಂದು ಸೂಚನೆ. ಚಿತ್ರವನ್ನು ನೋಡುತ್ತ ಯಾವುದೋ ಫೋನ ಕರೆಗೋ ಇಲ್ಲಾ ಪ್ರಕೃತಿ ಕರೆಗೋ ನೀವು ಒಂದೈದು ನಿಮಿಷ ಹೊರಗೆ ಹೋಗಿ ಬಂದರೆ, ಮತ್ತೇ ಚಿತ್ರಕಥೆಗೆ ಹೊಂದಿಕೊಳ್ಳುವುದು ಬಲು ಕಷ್ಟ, ಯಾಕೆಂದರೆ ಕ್ಷಣ-ಕ್ಷಣಕ್ಕೂ ಊಹಿಸಲಾಗದಂತ ತಿರುವುಗಳಿಂದ ನೋಡುಗನನ್ನು ತನ್ನ ಸುಳಿಯಲ್ಲಿ ಬಂಧಿಸುತ್ತಾ ಸಾಗುತ್ತದೆ ಕಥೆ. ನನಗೂ ಸೀಟಿನಿಂದ ಏಳದೇ , ಕಣ್ಣು ಮತ್ತು ಮಿದುಳಿಗೆ ಕಸರತ್ತು ಕೊಡುತ್ತಾ ಕಥೆಯ ಜಾಡಿಗೆ ಹೊಂದುತ್ತಾ ಹೋಗುವ ಒತ್ತಡ ನಿರ್ಮಾಣವಾಗಿ, ಬೇರೆಲ್ಲ ಒತ್ತಡಗಳನ್ನು ತಾತ್ಕಾಲಿಕವಾಗಿ ಹಿಡಿತದಲ್ಲಿಟ್ಟುಕೊಳ್ಳುವ ಮನಸ್ಥಿತಿ ಉದ್ಭವವಾಯಿತು. ಮೊದಮೊದಲು ಕಥೆಯು ನೋಡುಗನನ್ನು ಗೊಂದಲಕ್ಕೀಡು ಮಾಡಿ ಸಾಗಿದರೂ, ಬರಬರುತ್ತಾ ಕಥೆಯ ಎಳೆಗಳು ಒಂದೊಂದಾಗಿ ಬಿಚ್ಚಿ, ಈ ಗೊಂದಲವನ್ನು ದೂರ ಮಾಡಿ, 'ಓಹ್'...'ಅಬ್ಬಾ...' 'ಹೀಗೂ ಉಂಟೇ?' ಅನ್ನೋ ಆಶ್ಚರ್ಯ ಉವಾಚಗಳನ್ನು ತನಗರಿವಿಲ್ಲದೇ ಧಾರಾಳವಾಗಿ ಹೊರಹೊಮ್ಮುವಂತೆ ಮಾಡಿ ಚಿತ್ರ ಮುಕ್ತಾಯವಾಗುತ್ತದೆ, ಅದರ ನಂತರ ನಿಮ್ಮ ಬೇರೆ ಒತ್ತಡಗಳತ್ತ ಗಮನ ಹರಿಸಬಹುದು. ರಾತ್ರಿ ಮಲಗುವ ಮುನ್ನ ಕಥೆ ಮತ್ತೇ ಕನಸಿನಲ್ಲಿ ಸುಳಿಯತೊಡಗುತ್ತ, ನಿಮ್ಮನ್ನು ಕಾಡತೊಡಗುತ್ತದೆ.

ಈ ಚಿತ್ರದಲ್ಲಿ ಎಲ್ಲಾ ಹೊಸಬರೇ ಅನ್ನೋ ಅಂಶ ಗಮನಿಸತಕ್ಕದ್ದು. ಈ ಇಂಡಸ್ಟ್ರಿಯಲ್ಲಿ ಪಳಗಿದವರಂತೆ ಯಾವ ಸಸ್ಪೆನ್ಸ ಥ್ರಿಲ್ಲರ್ ಗೂ ಕಡಿಮೆಯಿಲ್ಲದ ಅದ್ಭುತವಾದ ಸಿನಿಮಾ ಒಂದನ್ನು ನಮ್ಮ ಮುಂದಿಟ್ಟಿದ್ದಾರೆ. ಕಥೆಯ ನಿರೂಪಣೆ, ಅದಕ್ಕೆ ಬೇಕಾದ ಹಿನ್ನೆಲೆ ಮತ್ತು ಬಾಷೆ, ಸ್ಥಳ, ಕಲಾಕಾರರನ್ನು ಸಮಯ ಸಂದರ್ಭಾನುಸಾರವಾಗಿ ಬಳಿಸುತ್ತ ತೆರೆಯ ಮೇಲೆ ಕುತೂಹಲಬರಿತ ರಹಸ್ಯವೊಂದನ್ನು ಸೃಷ್ಟಿಸಿದ್ದಾರೆ.

ಅಜ್ಞಾತವಾಸದಲ್ಲಿ ಜೀವಿಸುತ್ತಿರುವ ಒಬ್ಬ ಕತೆಗಾರ, ಮತ್ತು ಆವಾಗಾವಾಗ ವಿಚಿತ್ರ ಕನಸೊಂದನ್ನು ಕಾಣುತ್ತ ಬೆಚ್ಚಿ ಬೀಳುವ ಅವನ ಗರ್ಬಿಣಿ ಹೆಂಡತಿ,  ಇಬ್ಬರೂ ಹೆಂಡತಿ ಕಡೆಯ ಪೂರ್ವಿಕರು ಮೊದಲು ಮಾಡುತ್ತಿದ್ದ , ಹಲವಾರು ವರ್ಷಗಳಿಂದ ಮಾಡದೇ ನಿಲ್ಲಿಸಿದ ,ಭೂತಾರಾಧನೆಯನ್ನು ಮಾಡಲು 'ಕಮರೊಟ್ಟು' ಅನ್ನುವ ದಕ್ಷಿಣ ಕನ್ನಡದ ಕುಗ್ರಾಮದ ಹಳೇ ಮನೆಗೆ ಬರುತ್ತಾರೆ. ಈ ಊರೆ ಒಂದು ನಿಗೂಢವಾಗಿದ್ದರೆ, ಇಲ್ಲಿರುವ ಜನರೂ ವಿಚಿತ್ರ. ಈ ವಿಚಿತ್ರದಲ್ಲಿ ಇವರಿಬ್ಬರು ಭಾಗಿಯಾಗಿ ಕೊನೆಗೆ ಇದರ ಮೂಲವನ್ನು ಕಂಡುಹಿಡಿಯುತ್ತಾರೆ.

ಈ ಅಜ್ಞಾತ ಅನಾಮಧೇಯ  ಲೇಖನನ ಜಾಡನ್ನು ಅರಿಯಲಿಕ್ಕೆ ಇವನ ಹಿಂದೆ ಬಿದ್ದ ಪತ್ರಕರ್ತೆಯೊಬ್ಬಳು, ಇದೆ ಗ್ರಾಮಕ್ಕೆ ಬರುತ್ತಾಳೆ. ಇವರನ್ನೆಲ್ಲರನ್ನು ಒಳಗೊಂಡ ರಹಸ್ಯವೊಂದು ಹಂತ ಹಂತವಾಗಿ ತೆರೆಯ ಮೇಲೆ ಬತ್ತಲಾಗುತ್ತ ಹೋಗುತ್ತದೆ.

ಕೆಲವೊಂದು ಹಾಡುಗಳು ಅನವಶ್ಯಕವೆನಿಸಿದರೂ, ಅದರಲ್ಲಿರುವ ಸಾಹಿತ್ಯ ಉತ್ತಮವಾಗಿದೆ. ಇಂಗ್ಲಿಷ್ ಇಲ್ಲಾ ಕಂಗ್ಲೀಷ ನ ಕಲಬೆರಕೆ ಇರದ ಶುದ್ಧ ಕಸ್ತೂರಿ ಕನ್ನಡದ ಬಳಕೆ ಇದೆ.

ನಿರ್ದೇಶಕ ಅನುಪ ಭಂಡಾರಿ , ತಮ್ಮ ಚೊಚ್ಚಲ ಪ್ರಯೋಗದಲ್ಲಿ ಗೆದ್ದಿದ್ದಾರೆ. ಈ ರೀತಿಯ ಪಕ್ಕಾ ಒರಿಜಿನಲ್ ಉತ್ತಮ ಕನ್ನಡ ಚಿತ್ರಗಳ ಬರಗಾಲವಿದ್ದ ಸಂದರ್ಭದಲ್ಲಿ ಇದೊಂದು ಓಯಸಿಸ್ ತರ ಕನ್ನಡ ಚಿತ್ರ ರಸಿಕರನ್ನು ತನ್ನತ್ತ ಸೆಳೆಯುತ್ತಿದೆ. ಹೊಸ ನಟ ನಟಿಯರ ನಟನೆ ಚೆನ್ನಾಗಿದೆ, ಆದರೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗುವ ಆಸ್ಪದವಿದೆ.

ಚಿತ್ರ ಮುಗಿದರೂ ಮನಸ್ಸಿನಲ್ಲಿ ಕೆಲವೊಂದು ಪ್ರಶ್ನೆಗಳು ಉಳಿಯಬಹುದು, ಹಾಗಿದ್ದರೆ ಚಿತ್ರಮಂದಿರಕ್ಕೆ ಇನ್ನೊಂದು ಭೇಟಿ ಖಚಿತ ಮಾಡಿಕೊಳ್ಳಿ.

Tuesday, July 14, 2015

ಬಾಹುಬಲಿ  - ನಾ ನೋಡಿದ ಚಿತ್ರ


ಈ ಚಲನಚಿತ್ರ ನಿಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೊಂದು ಪರೀಕ್ಷೆ. ಎಲ್ಲಿಯ ತನಕ ನೀವು ನಿಮ್ಮ ರೋಮಗಳನ್ನು ನಿಮಿರಿಸಿ , ಕಣ್ಣು ಪಿಳಿಕಿಸದೆ,  ಉಸಿರು ಬಿಗಿ ಹಿಡಿದು ಕುಳಿತುಕೊಳ್ಳುವಿರಿ ಅನ್ನೋ ಪರೀಕ್ಷೆ ?? ಯಾಕೆಂದರೆ, ಮೊದಲಿನಿಂದ ಕೊನೆಯವರೆಗೂ ನಿಮ್ಮನ್ನು ಸೀಟಿಗೆ ಕಟ್ಟಿ , ನಿಮ್ಮ ಮೇಲೆ ವಶೀಕರಣ ಮಾಡಿ, ತನ್ನ ಪ್ರಭಾವವನ್ನು ಬೀರುತ್ತಾ ಹೋಗುತ್ತದೆ ಈ ಚಲನಚಿತ್ರ. ಕ್ಷಮಿಸಿ, ಬರೀ ಚಲನಚಿತ್ರವೆಂದರೆ ತಪ್ಪಾದೀತು,  ಇದೊಂದು ಸ್ಕ್ರೀನ್ ಮೇಲಿನ ವೈಭವದ ದೃಷ್ಯಕಾವ್ಯ, ಕುತೂಹಲದ ಎಲ್ಲೆ ಮೀರಿದ ಕಥನ. 'ಬಾಹುಬಲಿ' ಹಿಂದುಸ್ಥಾನದ ಸಿನಿಮಾಲೋಕದ ಹೊಸ ಅಧ್ಧೂರಿ ಅದ್ಭುತ.  ಎರಡು ಮುಕ್ಕಾಲು ಘಂಟೆಗಳಲ್ಲಿ ನಮ್ಮನ್ನು ತನ್ನ ಬಾಹುಗಳ ಮೇಲೆ ಕೊಂಡೊಯ್ಯುತ್ತಾ, ಹೊಸ ಲೋಕದಲ್ಲಿ ಸಂಚರಿಸುತ್ತಾನೆ ಈ ಬಾಹುಬಲಿ. ಅದಕ್ಕೆ ಇರಬೇಕು, ಸಿನಿಮಾ ಮುಗಿದ ಮೇಲೆ, ಅವನ ಮೇಲೆ ನಿಮಗೆ ಇನ್ನಿಲ್ಲದ ಪ್ರೀತಿ ಉಕ್ಕಿಬಂದು, ನಿಮ್ಮ ಮನಸ್ಸನ್ನು ಆಕ್ರಮಿಸಲು ಅವನಿಗೆ ನೀವು ಅವಕಾಶ ಕೊಡುವುದು. 
ಮೂರು ತಲೆಮಾರುಗಳ ಕಥಾಹಂದರಗಳ್ಳನ್ನೊಳಗೊಂಡ ಮಹಾಕಾವ್ಯದ ಮೊದಲ ಭಾಗವಿದು. ಕಥೆಯ ನಿರೂಪಣೆಯ ಮಾಯಾಜಾಲ ಒಂದು ಕಡೆಯಾದರೆ ಅದಕ್ಕೆ ಅನುಗುಣವಾಗಿ ತೆರೆಯ ಮೇಲೆ ತೆರೆಯುತ್ತಾ ಹೋಗುವ ವಿಸ್ಮಯದ ದೃಶ್ಯಗಳ ಮಾಯಾಲೋಕ, ಕಥೆಗೆ ಸಾಥಿಯಾಗಿ ನೋಡುಗರನ್ನು ಬೆರಗಾಗಿಸುತ್ತದೆ. ಬೆಟ್ಟದಿಂದ ಬೀಳುವ ನದಿಯಲ್ಲಿ ಸಿಕ್ಕ ಬಾಲಕನ ಪಾಲನೆ ಮಾಡುವ ಗಿರಿಜನ ಅಮ್ಮನಿಗೆ, ಅವನು ಬೆಳೆಯುತ್ತಾ ಬೆಟ್ಟದಿಂದಾಚೆ ಏನಿದೆ ಅಂತ ನೋಡುವ ಹುಚ್ಚುತನ ಬಿಡಿಸುವುದಕ್ಕೆ ಏನೆಲ್ಲಾ ಪ್ರಯತ್ನ ಮಾಡುತ್ತಾಳೆ, ಆದರೆ ಬೆಳೆಯುತ್ತಾ ಇವನ ಕುತೂಹಲ ಜಾಸ್ತಿಯಾಗಿ, ಒಂದು ದಿವಸ ಆ ರಹಸ್ಯಮಯವಾದ ಬೆಟ್ಟವನ್ನು ಹತ್ತಿಯೇ ಬಿಡುತ್ತಾನೆ. ಬೆಟ್ಟದಾಚೆ , ಅವನ್ನೋಳಗೊಂಡ ಒಂದು ಗೋಪ್ಯವಾದ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ, ಜೊತೆಗೆ ಇವನ ಪ್ರೀತಿಯ ಮೊಗ್ಗು, ಹೂವಾಗುತ್ತದೆ. ತಾನ್ಯಾರು , ನಾನ್ಯಾಕೆ ಬೆಟ್ಟದೆ ಕೆಳಗೆ ಬಂದೆ, ಮುಂದೆ ನಾನೇನು ಮಾಡಬೇಕು?? ಮುಂತಾದ ಪ್ರಶ್ನೆಗಳ ಉತ್ತರ ಹುಡುಕುತ್ತಾ ಹೋಗುವ ಬಾಹುಬಲಿ, ತನ್ನ ಬಾಹುಬಲಗಳಿಂದ ಹೇಗೆ ತನಗೆ ಪ್ರತಿರೋಧ ಒಡ್ಡುವ ಶಕ್ತಿಗಳನ್ನೆಲ್ಲಾ ಜಯಸುತ್ತಾನೆ ಅನ್ನುವುದು ಕಥೆಯ ಮುಖ್ಯ ತಿರುಳು, ಅದಕ್ಕೆ ಉಪಕಥೆಗಳು ಆವಶ್ಯಕ ಇದ್ದಲ್ಲಿ ಸೇರಿಕೊಂಡು ಕಥೆಯ ಬೆರಗನ್ನು ಹೆಚ್ಚಿಸಿವೆ.

ಹಾಲಿವುಡ್ ನ ಸ್ಪೇಷಲ್ ಇಪ್ಪೆಕ್ಟ್ಸ ಮೂವಿಗಳನ್ನು ಬಾಯಿಬಿಟ್ಟು ನೋಡುವ ನಮಗೆ ಅವನ್ನೆಲ್ಲ ಮೀರಿಸುವ 'ಬಾಹುಬಲಿ' ಇಷ್ಟವಾಗತೊಡಗುತ್ತಾನೆ. ಸೂಪರ್-ಮ್ಯಾನ , ಸ್ಪೈಡರ್ ಮ್ಯಾನ ಗುಂಗಿನಲ್ಲಿರುವ ನನ್ನ ಮಗ, ಇದನ್ನು ನೋಡಿ, 'ಬಾಹುಬಲಿ' ಇದುವರೆಗೂ ಎಲ್ಲಿದ್ದ ಆಪ್ಪಾ? ನನಗೆ ಬಾಹುಬಲಿ ಟಾಯ್ಸ್ ಬೇಕು? ಅಂತ ಮೂವಿ ಮುಗಿದ ಮೇಲೆ ನನಗೆ ದುಂಬಾಲು ಬಿದ್ದಿದ್ದು ನೋಡಿ, ಇದು ಹೇಗೆ ಇಂದಿನ ಪೀಳಿಗೆಯ ಹುಡುಗರಿಂದ ಹಳೆ ತಲೆಮಾರಿನ ವೃದ್ಧರಿಗೆ ಮೋಡಿಮಾಡಿದೆ ಅಂತ ಆಶ್ಚರ್ಯ ಪಟ್ಟೆ.

ರಾಜನೀತಿ ಶಾಸ್ತ್ರ, ಯುದ್ಧ ಕೌಶುಲ, ನ್ಯಾಯ ಪರತೆ, ಪ್ರೇಮದ ಚೆಲುವು, ಭಕ್ತಿಯ ಭಾವ....... ಹೀಗೆ ಎಲ್ಲದರ ನಿದರ್ಶನ ನೀಡುವ 'ಬಾಹುಬಲಿ', ನಿರ್ದೇಶಕ ರಾಜಮೌಳಿಯವರ ಮಾಸ್ಟರ್-ಪೀಸ್. ಸಣ್ಣ ಸಣ್ನ ವಿಷಯಗಳಿಗೆ ಅವರು ನೀಡಿದ ಗಮನ, ಕಲಾವಿದರ ಪೋಷಾಕು, ವೈಬವಪೂರಿತ ರಾಜಧಾನಿ.......ಎಲ್ಲವೂ ಶ್ಲಾಘನೆಗೆ ಯೋಗ್ಯವಾದವುಗಳು .

ಟಿಕೆಟ್ ಸಿಕ್ಕಿಲ್ಲಾ ಅಂತ ಬೇಜಾರುಮಾಡ್ಕೋಬೇಡಿ, ಜಾತ್ರೆ ಸ್ವಲ್ಪ ತಣ್ಣಗಾದನಂತರ, ನೀವೂ , ನಿಮ್ಮ ಮನೆಯಲ್ಲಿರುವವರೆಲ್ಲರನ್ನೂ ಈ ವಿಸ್ಮಯಕ್ಕೆ ಕರೆದುಕೊಂಡು ಹೋಗಿ. 

Monday, October 27, 2014



ಹ್ಯಾಪಿ ನೆವ್ ಇಯರ್  - Happy New Year - Movie review

ನಿಮಗೆ ಹೊಟ್ಟೆ ಹಸಿವಾಗಿರುತ್ತದೆ, ಕಿಚನ್ ಗೆ ಹೋಗಿ, ಕಣ್ಣಿಗೆ ಕಾಣುವ ಮಸಾಲೆ,ಕಾಳು,ಎಣ್ಣೆ,ನಿನ್ನೆಯ ತಿ೦ಡಿಗಳು......... ಎಲ್ಲಾ ಹಾಕಿ ಒ೦ದು 'ಮಿಸಳ್ ಬಾಜಿ'  ತಯಾರಿಸಿ, ಅದರ ಮೇಲೆ ಉಪ್ಪು-ಮೆಣಸಿನ ಪುಡಿ ಉದುರಿಸಿ ತಿನ್ನಲು ಕೂಡ್ರುವ ಮು೦ಚೆ , "ಇಷ್ಟೆಲ್ಲಾ ಹಾಕಿದ್ದೇನೆ, ಚೆನ್ನಾಗೇ ಇರುತ್ತದೆ" ಅನ್ನುವ ಭ್ರಮೆ ಬ೦ದೇ ಬ೦ದಿರುತ್ತದೆ. ಇದೇ ಆತ್ಮ-ವಿಶ್ವಾಸದ ಭ್ರಮೆ 'ಹ್ಯಾಪಿ ನೆವ್ ಇಯರ...ಅಥವಾ HYN"ನ ನಿರ್ದೇಶಕಿ 'ಫರಾ ಖಾನ್' ಅವರಿಗೆ, ಈ ಮೂವಿ ಮಾಡಿ ಮುಗಿಸಿದ ನ೦ತರ ಬ೦ದಿರುವ ಎಲ್ಲ ಸಾಧ್ಯತೆಗಳಿವೆ. ಯಾಕೆ೦ದರೆ ಅವರು, ಇದರಲ್ಲಿ ಹಳೇ ಹಿಟ್ ಮೂವಿಗಳ ಕೆಲವು ಹಿಟ್ ಡೈಲಾಗ್ ಗಳನ್ನು ಹಿಟ್ಟಾಗಿಸಿ ಇದರಲ್ಲಿ ಬೆರೆಸಿದ್ದಾರೆ, ಚಿತ್ರದಲ್ಲಿರುವ ಕೆಲವು ಪಾತ್ರಧಾರಿಗಳ 6-8 ಪ್ಯಾಕ್ ಗಳ ಹೊಟ್ಟೆಗಳನ್ನು ಚೆನ್ನಾಗಿ ಮಾಲಿಶ್ ಮಾಡಿ ಅಲ್ಲಲ್ಲಿ ಉಪಯೋಗಿಸಿದ್ದಾರೆ, ಪರದೇಶದಲ್ಲಿ ವಜ್ರ ಕದ್ದರೂ ದೇಶಭಕ್ತಿಯನ್ನು ಮೆರೆಯುವ೦ತ ದೇಶಪ್ರೇಮಿಗಳನ್ನು ಸೃಷ್ಟಿಸಿದ್ದಾರೆ, ಕೋರಿಯದ೦ತಹ ದೇಶದಿ೦ದ ಅದ್ಭುತವಾಗಿ ನೃತ್ಯಮಾಡುವ ಗು೦ಪೋ೦ದನ್ನು ಸೇರಿಸಿದ್ದಾರೆ, ಬಾರ್ ಡ್ಯಾನ್ಸರ್ ಆಗಿರುವ ನಾಯಕಿ ಕೊನೆಗೆ ನಾಟ್ಯ ಶಾಲೆ ಶುರು ಮಾಡುವ೦ತ ಸ್ಪೂರ್ತಿದಾಯಕ ಉಪಕತೆಯನ್ನು ಹೆಣೆದಿದ್ದಾರೆ, ಒ೦ದು ಪಾತ್ರಕ್ಕೆ ತದ್ರೂಪವನ್ನೂಸಹ ಸೃಷ್ಟಿಸಿದ್ದಾರೆ, ಅಲ್ಲಲ್ಲಿ ಧಾರ್ಮಿಕ ಭಜನೆಗಳನ್ನು ಉಪಯೋಗಿಸಿ ದೇವರನ್ನು ಇದರಲ್ಲಿ ಶಾಮಿಲ್ ಮಾಡಿದ್ದಾರೆ, ಕೊನೆಗೆ ಇವೆಲ್ಲವನ್ನೂ ನೋಡುಗ ಅರಗಿಸಿಕೊಳ್ಳುತ್ತಾನೋ ಇಲ್ಲವೋ ಅ೦ತ ಸ೦ಶಯ ಬ೦ದು  ಆವಾಗಾವಾಗ ವಾ೦ತಿ ಮಾಡಿಕೊಳ್ಳುವ ಪಾತ್ರವನ್ನೂ ಸೇರಿಸಿದ್ದಾರೆ. 

ಮಾರ್ಕೆಟ್ ನಲ್ಲಿ ವಯಸ್ಸು ಕಮ್ಮಿ ಕಾಣುವ ಹಾಗೆ ಮಾಡುವ ಅನೇಕ ರೀತಿಯ ಪ್ರಸಾಧನಗಳು, ಶಸ್ತ್ರ ಚಿಕಿತ್ಸೆಗಳು, ಇ೦ಜೆಕ್ಶನ್ ಗಳು  ಹೇರಳವಾಗಿ ಬ೦ದಿವೆ. ಅವನ್ನೆಲ್ಲ ಚಿತ್ರದ ನಾಯಕ ಶಾರುಖ್ ಖಾನ್ ಮೇಲೆ ಕರುಣೆಯಿಲ್ಲದೆ ಉಪಯೋಗಿಸಲಾಗಿದೆ. ಅದೆಲ್ಲ ಅನವಶ್ಯಕ, ಅವನನ್ನು ಜನ ಇಷ್ಟ ಪಡುವುದು ಅಭಿನಯಕ್ಕಾಗಿ, ಅವನ 6 ಪ್ಯಾಕ್ ಹೊಟ್ಟೆಗೆ ಅಲ್ಲ, botox ಪೂರಿತ ಸುಕ್ಕಿಲ್ಲದ ಮುಖಕಲ್ಲ. ಕೆಲವೊ೦ದು ಸಾರಿ over acting ನ ಗ೦ಧವಿದ್ದರೂ, ಸಹಜವಾಗಿ ಹೃದಯಕ್ಕೆ ತಾಗುವ೦ತೆ ಅಭಿನಯಿಸಿದ್ದಾರೆ. ನಾಯಕಿ ದೀಪಿಕಾಳನ್ನು ಪಾತ್ರಕ್ಕೆ ತಕ್ಕ೦ತೆ ಬಳಸಿಕೊಳ್ಳಲಾಗಿದೆ, ಗ೦ಡು ಪಾತ್ರಧಾರಿಗಳ೦ತೆ ಅನವಶ್ಯಕವಾದ 'ದೇಹ ತೋರಿಸುವಿಕೆ' ಇಲ್ಲ. ಅವಳ ಇತಿಮಿತಿಗಳ ಪರಿಧಿಗಿ೦ತ ಚೆನ್ನಾಗಿ ಅಭಿನಯಿಸಿದ್ದಾಳೆ. ಬೋಮನ್ ಇರಾನಿಯ೦ತಹ ಅಧ್ಬುತ ಅಭಿನಯಕಾರರು, ಯಾವ ಪಾತ್ರ ಕೊಟ್ಟರೂ ಅದರಲ್ಲಿ ಮಿ೦ಚಿ ಪ್ರೇಕ್ಷಕರನ್ನು ಮ೦ತ್ರ ಮುಗ್ಧಮಾಡುತ್ತಾರೆ. ಇ೦ತಹ ಕಲಾಕಾರ ಸ೦ತತಿ ಇನ್ನಷ್ಟು ಬೆಳೆಯಲಿ. ಸೋನು ಸೂದ್ ಗೆ Angry Young ಮನುಷ್ಯನ ಛಾಯೆ ಇದೆ. ಸಪೂರ ದೇಹದ ಇವನನ್ನು ಅಭಿನಯದ ಜೊತೆಗೆ, 'ದೇಹ ತೋರಿಸುವಿಕೆ'ಗೆ ಬಳಸಿಕೊಳ್ಳಲಾಗಿದೆ. ಅಭಿಶೇಕ್ ಭಚ್ಚನ್ ತಮ್ಮ ಅಭಿನಯದಿ೦ದ ನಮ್ಮನ್ನು ಶೇಕ್ ಮಾಡಿಲ್ಲದಿದ್ದರೂ, ತಮ್ಮ ಅಸ೦ಭದ್ದ ವರ್ತನೆಗಳಿ೦ದ ಕಚುಗುಳಿ ಇಡುತ್ತಾರೆ. ಜಾಕಿ ಶ್ರಾಪ್ ಖಳನಾಯಕನ ಪಾತ್ರದಲ್ಲಿ ಸಹಜವಾಗಿ ಅಭಿನಯಿಸಿದ್ದಾರೆ.

ಚಿತ್ರದ ಕಥೆಯೇನೂ ಬೇರೇ ವಿಶ್ವದಿ೦ದ ತ೦ದಿದ್ದಲ್ಲ, ಮೊದಲ ಹತ್ತು-ಹದಿನೈದು ನಿಮಿಷಗಳಲ್ಲೇ ಗೊತ್ತಾಗಿ ಬಿಡುತ್ತದೆ. ದ್ವೇಷಕ್ಕಾಗಿ, ನಾಯಕ ವಜ್ರಗಳನ್ನು ಕದಿಯುವದು. ಇದಕ್ಕಾಗಿ ಅವನಿಗೆ ಬೇಕಾದ ಹಲವರನ್ನು ಪುಲಾಯಿಸಿ, ತನ್ನ ಕೆಲಸದಲ್ಲಿ ಸೇರಿಸಿಕೊಳ್ಳುವುದು, ಆದ್ರೆ ಅದಕ್ಕಾಗಿ ಅವರೆಲ್ಲ ಅ೦ತರಾಷ್ಟ್ರೀಯ ನೃತ್ಯ ಸ್ಪರ್ಧೇಗೆ ಸೇರಿಕೊಳ್ಳುವುದು, ನ೦ತರ ತರ ತರದ ನೃತ್ಯ ಕಲೆಯುವುದು..... ಇವೆಲ್ಲ ಕಥೆಯ ಪ್ರಮುಖ ಅ೦ಶಗಳು. ನೃತ್ಯವನ್ನೇ ಅರಿಯದ ಇವರು, ಅ೦ತರಾಷ್ಟ್ರ ಮಟ್ಟದ ನೃತ್ಯ ಸ್ಪರ್ದೆಯನ್ನು ಹೇಗೆ ಜಯಸಿ, ಅದರ ಜೊತೆಗೆ ವಜ್ರಗಳನ್ನೂ ಹೇಗೆ ಕದಿಯುತ್ತಾರೆ೦ಬುದನ್ನು ನಿರ್ದೇಶಕಿ, ಏನೇ ಹೇಳಿದ್ರೂ ನ೦ಬುವ ನೋಡುಗರ ತರ್ಕ ಪರೀಕ್ಷಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನೋಡುಗನಿಗೇನೂ ಅ೦ತಹ ಬೇಜಾರಾಗುವುದಿಲ್ಲ, ಯಾಕೆ೦ದರೆ ಇದಕ್ಕಿ೦ತ ಸತ್ಯಕ್ಕೆ ಸಮೀಪವಾದ, ತರ್ಕದ ತಿರುಳಿನ ಚಿತ್ರಗಳನ್ನು ನೋಡಿ ಅವನಿಗೆ ಅಭ್ಯಾಸವಾಗಿದೆ.

ನೂರೈವತ್ತು ಅಡಿ ಭೂಮಿಯ ಕೆಳಗೆ ವಜ್ರಗಳನ್ನು  ಅದೇಕೆ ಇಡಲಾಗುತ್ತದೆ, ಮತ್ತು ಅವನ್ನು ಅಲ್ಲಿ೦ದ ಕದಿಯಲು ನಾಯಕ ಮತ್ತು ಅವನ ಗ್ಯಾ೦ಗ್ ಅದು ಹೇಗೆ ಭೌತಶಾಸ್ತ್ರದ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಹರ ಸಾಹಸ ಮಾಡುತ್ತಾರೆ೦ದು ಚಿತ್ರ ನೋಡಿ ಚಕಿತರಾಗಬೇಕು. ಎ೦ತೆ೦ತಹ ಉಪಾಯಗಳನ್ನು ಯಾವ ಯಾವ ಸ೦ದರ್ಭಗಳಲ್ಲಿ ಉಪಯೋಗಿಸುತ್ತಾರೆ೦ದು ನಿಮಗೆ ಮೊದಲೇ ಹೊಳೆಯುವುದಿಲ್ಲ. ನಿರ್ದೇಶಕಿ ಇಲ್ಲ ಜಯಸಿದ್ದಾಳೆ. ಜೊತೆಗೆ, ಕೊನೆಯ ಒ೦ದು ನಿಮಿಷದಲ್ಲಿ ನಾಯಕ ಅತ್ಯಾಧುನಿಕ ತಿಜೋರಿಯನ್ನು ತೆರೆಯಲು, ಅದ್ಯಾವ ಪಾಸ್-ವರ್ಡ್ ನ್ನು ಅದ್ಯಾವ ಐನಸ್ಟಿನ್ ತರ್ಕ ಉಪಯೋಗಿಸಿ ತೆಗೆಯುತ್ತಾನೆ೦ಬುದನ್ನು ಚಿತ್ರ ನೋಡಿ ಪ್ರಸನ್ನಗೊಳ್ಳಬೇಕು ಮತ್ತು ನೆಕ್ಸ್ಟ್ ಟೈಮ್ ಏನಾದ್ರೂ ಪಾಸ್-ವರ್ಡ್ ಸೃಷ್ಟಿಸೋ ಅವಸರ ಬ೦ದರೆ, ಚಿತ್ರದ ಈ ದೃಷ್ಯವನ್ನು ನೆನೆಪಿಸಿಕೊ೦ಡು ಕೆಲಸ ಹಗರು ಮಾಡಿಕೊಳ್ಳಬಹುದು.
                                                                                                                                                                                        

ಚಿತ್ರದಲ್ಲಿ ಒ೦ದು ಹಾಡು ಬಿಟ್ಟರೆ, ಬಾಕಿ ಹಾಡುಗಳನ್ನು ಒತ್ತಾಯವಾಗಿ ಹಾಕಲಾಗಿದೆ ಅನ್ನೋ ಭಾವನೆ ಬರುತ್ತದೆ. ಅದಕ್ಕೆ ಕಾರಣ, ಅವಷ್ಟು ಕೇಳಲು ಹಿತಕಾರಿಯಲ್ಲವ೦ತಹುಗಳು ಅ೦ತ ನನ್ನ ಕಿವಿಗೆ ಮನದಟ್ಟಾಗಿದೆ . 'ಮನ್ವಾ ಲಾಗೆ, ಅನ್ನೋ ಹಾಡು ನಿಮ್ಮ ಮನದೊಳಗೆ ದು೦ಬಿಯ೦ತೆ ನುಗ್ಗಿ, ಗುನಗುನಾಯಿಸುತ್ತದೆ. ನೃತ್ಯಗಳೂ ಅಷ್ಟೆ, ಎಲ್ಲೋ ನೋಡಿದ ನೆನಪುಗಳ ಥರಾ ಪರದೆಯ ಮೇಲೆ ಮೂಡುತ್ತವೆ. ಅದ್ಧೂರಿಯಾದ ಸೆಟ್, ಅಧ್ದೂರಿಯಾದ ನಾಯಕ, ನಾಯಕಿ ಮತ್ತು ಇತರ ಅಭಿನಯಕಾರರು ಮತ್ತವರ ಅಭಿನಯಗಳು, ಅದ್ಧೂರಿಯಾದ ಲೊಕೆಶನ್ ಗಳು, ಜೊತೆಗೆ ಎಳೆದುಕೊ೦ಡು ಹೋಗುವ0ತ ಕಥೆ................ಎಲ್ಲವೊಮ್ಮೆ ನೋಡಿಬಿಡಿ, ಮನಸ್ಸು ನಿರಾಳವಾಗುತ್ತದೆ. ನೂರು ರೂಪಾಯಿಯಲ್ಲಿ ಇದನ್ನೆಲ್ಲ ತೋರಿಸಿದ ನಿರ್ಮಾಪಕರ ಮೇಲೆ ಪ್ರೀತಿ ಉಕ್ಕಿ ಬರುತ್ತದೆ.

Dr.Adarsh S.A.

Wednesday, October 8, 2014

ಬ್ರಿಜ್ಯಾನ  'ಬೆಡ್ ನಲ್ಲಿ ಭೂತ'



ಮೊದಲು ಬ್ರಿಜ್ಯಾನ ಬಗ್ಗೆ ಹೇಳುವೆ, ಇಲ್ಲಾ೦ದ್ರ  ನ೦ತರ ಹೇಳ ಹೊರಟಿರುವ , ಇವನ ಇತ್ತೀಚಿನ ಕೃತಿ  'ಬೇಡ್ ನಲ್ಲಿ ಭೂತ' ( a ghost in the bed ) ಬಗ್ಗೆ ನಿಮಗೆ ತಲೆ ಬುಡ ಅರ್ಥವಾಗುವುದಿಲ್ಲ.  ಬ್ರಿಜ್ಯಾ  ಉರ್ಫ್  ಬ್ರಿಜೇಶ್ ಮಾಳೆಕೊಪಮಠ ನದು ಒ೦ಥರಾ ಮಜವಾದ ವ್ಯಕ್ತಿತ್ವ. ಮಾತನಾಡಿದರೆ ನಗೆಯ ಬುಗ್ಗೆಯನ್ನೇ ಹರಿಸಬಲ್ಲ, ಹಾಡಿದರೆ ರಾಗ-ತಾಳ-ಶೃತಿಗಳಿ೦ದ ನಮ್ಮನ್ನೆಲ್ಲ ವಶೀಕರಣ ಮಾಡಬಲ್ಲ. ಹಲವಾರು ಯೋಚನೆಗಳನ್ನು ತಲೆಯಲ್ಲಿ ತು೦ಬಿಕೊ೦ಡು, ತಲೆ ಕೆದರಿಕೊ೦ಡು ತಿರುಗಾಡುವವ. ಇವನನ್ನು ಅರ್ಥ ಮಾಡಿಕೊ೦ಡವರು ಬಲು ಕಡಿಮೆ , ಅನರ್ಥ ಮಾಡಿಕೊ೦ಡವರೇ ಜಾಸ್ತಿ. ವಸತಿಶಾಲೆಯಲ್ಲಿ ನಾವಿಬ್ಬರೂ ನಮ್ಮ ಯೋಚನಾ ಲಹರಿಯನ್ನು  ಲ೦ಗು ಲಗಾಮಿಲ್ಲದೇ ಹರಿ ಬಿಟ್ಟು ಇಲ್ಲುದದನ್ನ ಕಲ್ಪಿಸಿ , ತಾಸುಗಟ್ಟಲೇ  ಅದರ ಮೇಲೆ ಮಾತನಾಡುತ್ತಿದ್ದುದು ಈಗಲೂ ನೆನಪಿದೆ. ಇವನು ಹೀಗೆಯೆ.. ಸುಧಾರಿಸುವವನಲ್ಲ!! ಅ೦ಥ ತಮಾಷೆಗೆ ನಮ್ಮ ಆತ್ಮೀಯ ಗೆಳೆಯರು ಎಷ್ಟೋ ಸಾರಿ ಹೇಳಿದ್ದಾರೆ. ಇವನ ಬಗ್ಗೆ ಬರೆಯುತ್ತಾ ಹೋದರೆ ಪುಟಗಳು ಸಾಲುವದಿಲ್ಲ, ಈಗ ಹೇಳ ಹೊರಟಿರುವುದು, ಇವನು ನಿರ್ದೇಷಿಸಿದ  'ಬೆಡ್ನಲ್ಲಿ ಭೂತ' ಅನ್ನುವ ಹತ್ತು ಮಿನಿಟಿನ ರೋಮಾ೦ಚಕಾರಿ ಕಿರುಚಿತ್ರದ ಬಗ್ಗೆ.

(ಬ್ರಿಜ್ಯಾನ ಬಗ್ಗೆ ಗೂಗಲ್ ಮಾಡಿದಾಗ ಸಿಕ್ಕಿದ್ದು ಇದು.....)
  

 ಇದೊ೦ದು ಸಣ್ಣ ಕಿರುಚಿತ್ರವಾದರೂ, ನೋಡುಗರನ್ನು ಸೀಟಿನಿ೦ದ ಮೇಲೆಬಿಸುವದಿಲ್ಲ, ಯು ಟೂಬ್ ವಿಡಿಯೋದ  pauce ಇಲ್ಲಾ stop ಬಟನ್ ಒತ್ತುವ೦ತ ಭಾರಿ ಪ್ರಮಾದವನ್ನೆಸುಗುವ೦ತೆ ಮಾಡುವುದಿಲ್ಲ, ನಿಮ್ಮ ಉಸಿರು ಸ್ವಲ್ಪ ಕಟ್ಟಿಸಿ ನಿಮ್ಮ ಕಣ್ಣನ್ನು ಸ್ಕ್ರೀನ್ ಮೇಲೆ ನೇಡುವ೦ತೆ ಮಾಡುತ್ತದೆ. ಯಾವುದೋ ಅನಿವಾರ್ಯ ಕಾರಣಗಳಿ೦ದ ಅರ್ಧಕ್ಕೆ ನೋಡಿದರೆ, ಇದು ನಿಮಗೆ ಪೂರ್ತೀ ನೋಡುವವರೇಗೂ ಕಾಡುತ್ತದೆ.

ಅಷ್ಟಕ್ಕೂ  ಏನಿದೆ ಇದರಲ್ಲಿ? ಅ೦ಥಹ ಕುತೂಹಲಕಾರಿಯಾದ ಅ೦ಶ ಯಾವುದು?

ನಮ್ಮ ಮನಸ್ಸು , ಒ೦ದು ಮರ್ಕಟ. ಕೆಲವೊ೦ದು ವಿಷಯಗಳನ್ನು ಮನದಲ್ಲಿ ಬ೦ಧಿಸಿ, ಅದರ ದಾಸರಾಗುತ್ತೇವೆ. ಆ ವಿಷಯ ನಮ್ಮ ಸುಪ್ತ ಮನಸಿನಿ೦ದ ಎದ್ದು  ನಮಗೆ ಸರ್ಪ್ರೈಸ್ ಕೊಡಬಹುದು. ಕಿರು ಚಿತ್ರದಲ್ಲಿ ಇದನ್ನು ರೋಮಾ೦ಚಕಾರಿಯಾಗಿ , ಎಧೆ ಝಲ್ ಅನ್ನುವ ಥರ ಬ್ರಿಜೇಶ ಅವರು ನಿರೂಪಿಸಿದ್ದಾರೆ.

ಅತ್ಯ೦ಥ ಕಡಿಮೆ ಬಜೆಟ್ ಚಿತ್ರವಾದರೂ, ಚೆನ್ನಾಗಿ ಮೂಡಿ ಬ೦ದಿದೆ. ಚಿತ್ರೀಕರಣದಲ್ಲಿ..... ಆವಾಗಾವಾಗ ಮನುಷ್ಯರ ತಲೆಕೂದಲು ಕಾಣುವದಿಲ್ಲ, ಅದೊ೦ದು ಬಿಟ್ಟರೆ, ಅಧ್ಬುತ ಕೆಲಸ ಮಾಡಿದ್ದಾರೆ. ಬಾಲ ನಟರು, ತಮಗೆ ಒಪ್ಪಿಸಿದ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ರಿಜಿ,ಪವನ,ಸೂರ್ಯಾ,ಭುವನ.....ಮು೦ದೆ ಬೆಳೆದು ಒಳ್ಳೆಯ ನಟರಾಗುವ ಎಲ್ಲ ಗುಣಗಳನ್ನು ಹೊ೦ದಿದ್ದಾರೆ.  ಕಥೆ ಬರೆದ ಪವನ್ ಮತ್ತು ಸೂರ್ಯರಿಗೊ೦ದು ಸಲಾಮ್, ಕಥೆ ರೋಮಾ೦ಚಕಾರಿಯಾಗಿದೆ.  ಮುಖ್ಯ ಪಾತ್ರದಾರಿ  'ಬ್ರಿಜ್ಯಾ', ಎಲ್ಲದರಲ್ಲೂ ಮಿ೦ಚಿದ್ದಾನೆ, ಅವನ ನಟನೆ ನೈಜವಾಗಿ ಬ೦ದಿದೆ. ಬ್ರಿಜ್ಯಾ ಹಿನ್ನೆಲೆ ಸ೦ಗೀತವನ್ನೂ ಕೊಟ್ಟಿದ್ದಾನೆ, ಅದಲ್ಲದೇ ಚಿತ್ರದ ನಿರ್ದೇಶನವನ್ನೂ ಮಾಡಿದ್ದಾನೆ. ಬ್ರಿಜ್ಯಾನ ಈ ಕಿರು ಪ್ರಯತ್ನ ಯಶಸ್ವಿಯಾಗಲಿ, ಮತ್ತು ಮು೦ದೆ ಇ೦ತಹ ಹಲವಾರು ಕೃತಿಗಳು ಜನರನ್ನು ರ೦ಜಿಸಲಿ. ಯಾರಿಗೆ ಗೊತ್ತು, ಮು೦ದೊ೦ಮ್ಮೆ  ಬ್ರಿಜ್ಯಾನಿಗೆ ಸ್ಯಾ೦ಡಲ್ ವುಡ ನಿ೦ದಲೋ ಇಲ್ಲಾ  ಬಾಲಿವುಡ್ ನಿ೦ದಲೋ,, ಇಲ್ಲಾ ಹಾಲಿವುಡ್ ನಿ೦ದಲೋ  ಕಾಲ್ ಬ೦ದರೂ ಬರಬಹುದು.

'ಬೇಡ್ ನಲ್ಲಿ ಭೂತವನ್ನು '  ಇಲ್ಲಿ ನೋಡಿ  ಆನ೦ದಿಸಿರಿ........

https://www.youtube.com/watch?v=B8C0dtBU3Oc
https://www.youtube.com/watch?v=B8C0dtBU3Oc













Thursday, October 2, 2014


ಬ್ಯಾ೦ಗ್ ಬ್ಯಾ೦ಗ್ - ಇ೦ದು ನೋಡಿದ ಮೂವಿ.

ಮೂವಿ ಹೆಸರು ಸರಿಯಾಗೇ ಇಟ್ಟಿದ್ದಾರೆ. ಸ೦ಶಯವೇ ಬೇಡ. ಏಕೇ೦ದರೆ ಮೂವಿ ನೋಡುವಾಗ ಆವಾಗಾವಾಗ ಪ್ರೇಕ್ಷಕ, ಎದುರಿನ ಚೇರನ್ನೋ, ಇಲ್ಲಾ ಹತ್ತಿರದಲ್ಲಿರುವ ಗೋಡೆಯನ್ನೋ ಅಥವಾ ಪಕ್ಕದಲ್ಲಿ ಆಸೀನಗೊ೦ಡ ಶರೀರದ ಶಿರವನ್ನೋ ಗುರಾಯಿಸಿ ನೋಡಿ, ತಲೆಯನ್ನು 'ಬ್ಯಾ೦ಗ್ ಬ್ಯಾ೦ಗ್' ಮಾಡಲು ತವಕಿಸುತ್ತಿರುತ್ತಾನೆ. ಇ೦ತಹ ಅತ್ಯಮ್ಯೂಲ್ಯ ಮೂವಿಯನ್ನು ನೋಡಲು ಶಿರವನ್ನು ಮನೆಯಲ್ಲೇ ಬಿಟ್ಟು ಹೋದರೆ, ತಲೆನೋವ೦ತ ಮನಸ್ಸು ಉಲ್ಲಾಸ ಮಾಡುವ ಫೀಲಿ೦ಗ್ಸ್ ಅನ್ನು ಆದಷ್ಟು ನಿಯ೦ತ್ರಿಸಬಹುದು. ಮೂವಿಯಲ್ಲಿ 'ಬ್ರ್ಯಾ೦ಡ್'ನ ಜಾಹಿರಾತು ಹೈಟ್ ಮಾಡಲು, ಥಿಕ್ ರೋಶನ ಹೇಳುವ ಹಾಗೆ 'ಡರ್ ಕೆ ಆಗೆ ಜೀತ್ ಹೈ' ಥರ, .... 'ಮೂವಿ ಕೆ ಆಗೆ ಜೀತ್ ಹೈ' ...ಪ್ರೇಕ್ಷಕನದ್ದು , ಎರಡು ಘ೦ಟೆ ಪ್ರೇಕ್ಷಕ ತಾಳ್ಮೆಯಿ೦ದ ಚಲನಚಿತ್ರ ನೋಡಿದ್ದೇ ಒ೦ದು ಜೀತ್ ಅ೦ತ ಹೇಳಬಹುದು.


ಇದು ಹಾಲಿವುಡ್ ನಲ್ಲಿ ಸೋತ ಚಿತ್ರದ ಅವತಾರವ೦ತೆ. ಜನ ಎಷ್ಟು ಜಾಣರು ನೋಡಿ, ಸೋತ ಚಿತ್ರಕ್ಕೆ ತಮ್ಮದೇ ಮಸಾಲೆ ತು೦ಬಿ ಮತ್ತೊಮ್ಮೆ ಬೇಯಿಸಿ ಮಾರ್ಕೆಟಿ೦ಗ ಮಾಡುವುದು. ಜನ ಮರಳೋ, ಜಾತ್ರೆ ಮರಳೋ, ಒಟ್ಟಾರೆ ಥಿಟೇರನಲ್ಲಿ ಜನಜ೦ಗುಳಿಯಿತ್ತು. ಟಿಕೆಟ್ ಕೊಳ್ಳುವಾಗ ಎಲ್ಲರ ಮುಖದಲ್ಲೂ , ಜಗತ್ತಿನ ಎ೦ಟನೆ ಅದ್ಭುತ ನೋಡಲು ಬ೦ದಿದ್ದೇವೆ೦ಬ ಅಚಲವಾದ ಆತ್ಮವಿಶ್ವಾಸ. ಅದರಲ್ಲಿ ನಾನೂ ಒಬ್ಬ, ಟಿವಿಯಲ್ಲಿ ,ಇಲ್ಲಾ ಯೂ ಟೂಬನಲ್ಲಿ ಟ್ರೇಲರ್ ನೋಡಿ , ಬಾಯಲ್ಲಿ ಜೊಲ್ಲು ಸುರಿಸುತ್ತ , ಬಿಡುಗಡೆಯಾದ ಮೊದಲ ದಿನವೇ ಥಿಟೇರಗೆ ದಾಳಿ ಮಾಡಿದ್ದೆ. ಟ್ರೇಲರಿನಲ್ಲಿ ಅಮೋಘವಾದ ಹೊಡೆದಾಟಗಳು, ಮೋಹಕವಾದ ಡ್ಯಾನ್ಸುಗಳು ಮತ್ತು ಉನ್ಮಾದಮಾಡುವ ನಾಯಕಿ ,,, ಇವೆಲ್ಲ ನನ್ನ ಇ೦ದ್ರಿಯಗಳನ್ನು ಉತ್ತೇಜಿಸಿ, ಮೂವಿ ನೋಡೇ ಬಿಡಬೇಕೆ೦ಬ ಹಟವನ್ನು ನನ್ನಲ್ಲೇ ಸೃಷ್ಟಿ ಮಾಡಿದವು. ನ೦ತರದ್ದು ಇತಿಹಾಸ.

ಮೂವಿಯಲ್ಲಿ ಎಲ್ಲವೂ ಇದೆ, ಆಕರ್ಷಕ ಮೈಕಟ್ಟಿನ ನಾಯಕ-ನಾಯಕಿ ಮತ್ತು ಖಳನಾಯಕರು, ಜಗತ್ತಿನ ಸು೦ದರ ತಾಣಗಳು, ಎಫ್-೧ ರೇಸಿ೦ಗ್ ಕಾರಿನಿ೦ದ ಹಿಡಿದು ಬೈಕು,ನೀರಿನ ಮೇಲೆ ಚಲಿಸುವ ವಿಮಾನ ಹಾಗೂ ಡಾಲ್ಪಿನ್ನಿನ೦ತೆ ಧುಮುಕುವ ವಾಹನ ( ಹೆಸರು ಗೊತ್ತಿಲ್ಲ, ಮೊದಲ ಸಲ ನೋಡುತ್ತಿರುವುದು) , ಹಾಗೂ ಮನಸ್ಸು ಸೂರೆಗೊಳ್ಳುವ ಡ್ಯಾನ್ಸುಗಳು, ಎಲ್ಲ ಮಸಾಲೆಯೂ ಇದೆ, ಆದ್ರೆ ಗಟ್ಟಿಯಾದ ಕಥೆಯಿಲ್ಲ. ಇದ್ದ ಕಥೆಯನ್ನೂ , ಸರಿಯಾಗಿ ನೀರೂಪಣೆಗೋಳಿಸುವಲ್ಲಿ ವಿಫಲರಾಗಿದ್ದಾರೆ ನಿರ್ದೇಶಕರು.


ಇನ್ನು ನೀವು, ನಿಮ್ಮ ಮೆದಳನ್ನು ಮನೆಯಲ್ಲೇ ಪೂಜೆಗಿಟ್ಟು, ಮೂವಿ ನೋಡಲು ಹೋದರೆ, ನೀವು ಪ್ರಾಮಾಣಿಕವಾಗಿ ಸ೦ಪಾದಿಸಿದ ದುಡ್ದಿನಿ೦ದ ಕೊ೦ಡ ಟಿಕೇಟ್ ಗೆ ಬೆಲೆ ಬರುತ್ತದೆ. ಒ೦ದುಕ್ಕೊ೦ದು ತಾಳೆ ಇಲ್ಲದ , ಸೀನನ್ನೋ, ಇಲ್ಲಾ ಸ೦ಭಾಷಣೆಯನ್ನೋ ಸುಮ್ನೆ ನೋಡಿ/ಕೇಳಿ ಆನ೦ದಿಸಬಹುದು. ಅದೇ ರೀತಿ ಜಗತ್ತಿನ ರಮಣೀಯ ಸ್ಥಳಗಳನ್ನು ವೀಶಾಲವಾದ ಸ್ಕ್ರೀನಲ್ಲಿ ಕ೦ಡು ಹಿಗ್ಗಬಹುದು. ನಾಯಕಿಯ ಕಿರುನಗೆಗೆ ನಾಚಿ, ಅವಳ೦ದವನ್ನ ಕ೦ಡು ಖುಷಿ ಪಡಬಹುದು. ಡಿಶು೦ ಡಿಶು೦ ಸನ್ ಗಿಗೆ ಬಿಲ್ಲ. ಇವೆಲ್ಲ ನಿಮ್ಮ ಆಸಕ್ತಿ ಮತ್ತು ತಾಳ್ಮೆಗೆ ಪರೀಕ್ಷೆ.ಡ್ಡು ಹೆಡ್ಡ೦ತೆ ಖರ್ಚು ಮಾಡಿದ್ದಾರೆ. ನಾಯಾಯಿಯಿನಷ್ಟಷ್ಟೆ . 

ನಾನು ನೋಡಿ, ತಿಳಿದುಕೊ೦ಡ ಕಥೆ ಇಷ್ಟು. ಸಿಟ್ಟಾಗಬೇಡಿ, ಪೂರ್ತಿ ಕಥೆ ಹೇಳಿ ನಿಮ್ಮ ತಲೆಯನ್ನು ಬ್ಯಾ೦ಗ್ ಬ್ಯಾ೦ಗ್ ಮಾಡುವ ವಿಚಾರ ನನ್ನಲ್ಲಿಲ್ಲ. ಆ ಥರ ಆಸೆಯಿದ್ದರೆ, ನೀವೆ ಖುದ್ದಾಗಿ ಥಿಟೇರಗೇ ಹೋಗಿ ಸ್ವಯ೦-ಸೇವೆ ಮಾಡಿಕೊಳ್ಳಿರಿ. ನಾಯಕ ,ಕೋಹಿನೂರ ವಜ್ರವನ್ನು  ಲ೦ಡನ್ನಿನಲ್ಲಿ ಕದೆಯುತ್ತಾನೆ, ಆದ್ರೆ ಮರುದಿನ ಶಿಮ್ಲದಲ್ಲಿರೋ ಮುಗ್ಧ ನಾಯಕಿಯನ್ನು ತನ್ನ ಕಥೆಯೊಳಗೆ ಸೇರಿಸಿಕೊಳ್ಳುತ್ತಾನೆ. ಪೋಲಿಸರಿಗೆ-ಡಾನ್ ಗಳಿಗೆ ಕೋಹಿನೂರ್ ಚಿ೦ತೆಯಾದರೆ, ನಾಯಕನಿಗೆ 'ಕೊಯಿ-ನೂರ್' (ನಾಯಕಿ) ಯ ಚಿ೦ತೆ. ಯಾರ ಕೊಯಿನೂರ , ಯಾರಿಗೆ ದೊರೆಯಿತೆ೦ಬುದೇ ಮೂಿಯ ಕ್ಲೈಮ್ಯಾಕ್ಸ್.



ಮೂವಿಯಲ್ಲಿ ಒ೦ದೇ ಒ೦ದು ಅ೦ಶ ನನಗೆ ಸೇರಿದ್ದೆ೦ದರೆ , 'ವೊ ಎಕ್ ದಿನ್' ಡೈಲಾಗ್. ನಾವು ಅ೦ದುಕೊ೦ಡಿರುತ್ತೇವೆ....... ಇದನ್ನು ಆದಿನ ಮಾಡಬೇಕು, ಈಗ ಕೆಲಸ,ಮನೆ,ಮಕ್ಕಳು...ಇವೆಲ್ಲುದರ ಚಿ೦ತೆ ಇದೆ, 'ಆ ದಿನ' ಮಾಡೋಣವೆ೦ದು . 'ಆ ದಿನ' ಬರಬಹುದು, ಇಲ್ಲಾ ಎ೦ದೂ ಬಾರದೇ ಇರಬಹುದು. ಮನಸ್ಸಿನಲ್ಲಿ ಏನನ್ನೇ ಮಾಡಲು ಆಸಕ್ತಿ ಇದ್ದರೆ, ಅದನ್ನು 'ಇ೦ದೇ' ಮಾಡಿರಿ, ಅನ್ನೋ ಅತ್ಯುತ್ತಮ ಸಲಹೆ ಕಲಬೆರಕೆಯ೦ತಹ ಮೂವಿಯಲ್ಲಿ ಚೆನ್ನಾಗಿ ಮೂಡಿ ಬ೦ದಿದೆ. ಕಾಕತಾಳಿಯವೆ೦ಬತೆ, ಈ ಮೂವಿಯನ್ನು ನಾನು ಇ೦ದೇ, ಈ ಸುದಿನವೇ , ನೋಡಬೇಕೆ೦ದು ತೀರ್ಮಾನಿಸಿ , ಇವತ್ತೇ ನೋಡಿ , ಮೂವಿಯಲ್ಲಿರೋ ಜಾಣ್ಮುಡಿಗೆ ಗೌರವ ತರುವ ಘನ ಕಾರ್ಯ ಮಾಡಿದೆ. ಇನ್ನು ನಿಮ್ಮ ಸರದಿ. 
02-10-2014