ಮೊಬೈಲಿಲ್ಲದ ಮುಂಜಾನೆ!
"ಲೆಟ್ಸ್ ಪ್ಲೆ ಅ ಗೇಮ್ !"
ಎಡಕಲ್ಲ ಗುಡ್ಡದ ಕೆಳಗಿನ ನಮ್ಮ ಫೇವರೇಟ್ ಅಡ್ಡಾ - ಕೆರೆಯ ದಡದ ಮೆಟ್ಟಲುಗಳ ಮೇಲೆ ಕುಳಿತು, ನನ್ನ ಎರಡು ಮಗಳಿಂದರನ್ನು ನೋಡುತ್ತಾ ಹೇಳಿದೆ. ಪ್ರಕೃತಿ ಸದೃಶ್ಯ ರಮ್ಯ ರಮಣೀಯ ದೃಶ್ಯಾವಳಿ ನೋಡುವದರ ಬದಲು ನಮ್ಮಪ್ಪ ಯಾವುದೋ ಗೇಮ್ ಆಡಲು ಕರೆಯುತ್ತಿದ್ದಾನೆಂದು ಅವರಿಗೆ ಸ್ವಲ್ಪ ಕಸಿವಿಸಿ ಆದರೂ ಕುತೂಹಲಕ್ಕೆ ತಲೆಯಾಡಿಸಿದರು.
ಸಿಂಪಲ್ ಗೇಮ್ - ನಮಗೆ ಕಾಣುವ, ನಮ್ಮ ಕಣ್ಣೆದೆರಿಗಿರುವ ಒಂದೊಂದು ವಸ್ತು ಅಥವಾ ಜೀವಿಗಳ ಹೆಸರನ್ನ ಒಬ್ಬೋಬ್ಬರಾಗಿ ಹೇಳಬೇಕು, ರಿಪೀಟ್ ಮಾಡಬಾರದು. ಯಾರು ಕೊನೆಯವರೆಗೆ ಉಳಿದು, ಅಧಿಕತಮ ವಸ್ತು/ಜೀವಿಗಳ ಹೆಸರುಗಳನ್ನ ಹೇಳುತ್ತಾರೋ ಅವರು ವಿನ್ನರ್. ಗೇಮ್ ಶುರುವಾಯಿತು. ಇತ್ತ ನಮ್ಮ ಬೆನ್ನ ಹಿಂದೆ ಸೂರ್ಯೋದಯವಾಗುತ್ತಲಿತ್ತು.
'ಗುಡ್ಡ'
'ಗುಡ್ಡದ ಸುತ್ತಲಿನ ಮರಗಳು'
'ಕೊಕನಟ್ ಟ್ರೀ' ( ನನ್ನ ಸಣ್ಣ ಮಗಳ ಏಂಟ್ರಿ)
'ಹಳದಿ ಬಣ್ಣದ ಹೂಗಳು'
'ನೀಲಾಕಾಶ'
'ಬಿಗ್ ರಾಕ್ಸ್'
'ನೀರು - ಮುಂದಿರುವ ತಿಳಿನೀರಿನ ಕೆರೆ'
'ಸ್ಟೆಪ್ಸ್'- ನಾವು ಕೂತಿರುವ ಮೆಟ್ಟಿಲುಗಳು
'ಆಕಾಶದಲ್ಲಿ ಹಾರಾಡುತ್ತಿರುವ ಹಕ್ಕಿಗಳು'
ನಮ್ಮ ಗೇಮ್ ಗೆ ಈಗ ತಾತ್ಕಾಲಿಕ ತಡೆ ಬಂದಿತು, ಕಣ್ಮುಂದೆ ಕಾಣುವ ಎಲ್ಲವನ್ನೂ ಹೆಸರಿಸಿ ಆಯಿತಲ್ಲ, ಮತ್ತೇನು ಉಳಿದಿದೆ?
'ಅಲ್ಗೆ (ಪಾಚಿ)' - ನನ್ನ ಹತ್ತು ವಯಸ್ಸಿನ ಹಿರಿ ಮಗಳು ವಿಹಾನಾ ಗೇಮ್ ಮುಂದುವರೆಸಿದಳು,
'ಬಳ್ಳಿ' - ಕೆಲ ಮರಗಳಿಗೆ ಸುತ್ತಿ ಗಗನಕ್ಕೆ ಚಿಮ್ಮುವ ಬಳ್ಳಿಗಳನ್ನ ತೋರುತ್ತ ನಾನು ಹೇಳಿದೆ,
'ಗ್ರಾಸ್ - ಹುಲ್ಲು' ನನ್ನ ನಾಲ್ಕೂವರೆ ವಯಸ್ಸಿನ ಸಣ್ಣ ಮಗಳು ರಿಷಿತಾ ಹೇಳಿದಳು.
ಗೇಮ್ ಈಗ ಕುತೂಹಲವಾಗತೊಡಗಿತು, ಕೆಲವೊಂದು ಅನಿರೀಕ್ಷಿತ ವಿಸ್ಮಯಗಳು ಅನಾವರಣಗೊಳ್ಳತೊಡಗಿದವು.
'ರೆಪ್ಲೆಕ್ಷನ್ಸ್' .......'ರೆಪ್ಲೆಕ್ಷನ್ಸ್' ಅಪ್ಪಾ.....ಅಂತ ವಿಹಾನಾ ಕುತೂಹಲ ಕಣ್ಣುಗಳಿಂದ ನನ್ನತ್ತ ನೋಡಿ ಹೇಳಿದಳು. ನೋಡು ನೀರಿನ ಮೇಲೆ ನೋಡು, ಗುಡ್ಡ ಮತ್ತು ಅದರ ಮೇಲೀರುವ ಗಿಡಗಳ ಪ್ರತಿಬಿಂಬ ನೀರಿನ ಮೇಲೆ ಕಾಣಿಸ್ತಿದೆ. ನಾನು ತಲೆಯಾಡಿಸಿದೆ.
'ಫಾಗ್ - ಮುಂಜಾನೆ ಮಂಜು' ....ಅದಕ್ಕೇ ಗುಡ್ಡ ಅಷ್ಟು ಕ್ಲಿಯರ್ ಆಗಿ ಕಾಣಿಸ್ತಿಲ್ಲ ಅಂತ ನಾನೆಂದೆ.
'ಆಂಟ್ಸ್' - ನಾವು ಕುಳಿತ್ತಿದ್ದ ಮೇಟ್ಟಲಿನ ಮುಂದಿನ ಮೆಟ್ಟಲಿನ ಮೇಲಿನ ಇರುವೆಗಳ ಸಾಲನ್ನ ನೋಡುತ್ತ ರಿಷಿತ್ತಾ ಹೇಳಿದಳು.
ಗೇಮ್ ಮುಂದುವರೆಯತೊಡಗಿತು. ಮಗಳಿಬ್ಬರೂ ಎಲ್ಲಾ ದಿಕ್ಕಿನತ್ತ ಕಣ್ಣಾಹಿಸಿ ನೋಡಿ ಏನೇನೋ ಗ್ರಹಿಸುತ್ತಿದ್ದರು.
'ಪೊಲ್ಲುಶನ್' ..... ಸ್ವಲ್ಪ ದೂರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿ ತೋರಿಸಿ ಹಿರಿ ಮಗಳು ಹೇಳಿದಳು.
ನನ್ನ ಬತ್ತಳಿಕೆಯಲ್ಲಿದ್ದ ಬಾಣಗಳೆಲ್ಲ ಮುಗಿದಿದ್ದವು, ಅದಕ್ಕೆ ಸುಮ್ಮನಿದ್ದೆ.
'ಸನ್-ಸೂರ್ಯ' ಅಂತ ರಿಷಿತಾ ಹಿಂದೆ ಹೊರಳಿ ಹೇಳಿದಳು.
'ಸನ್ ರೇಯ್ಸ್' ಅಂತ ವಿಹಾನ ಗೇಮ್ ಮುಂದುವರೆಸಿದಳು. ಸೂರ್ಯರಷ್ಮಿಗಳು ಈಗ ನಮ್ಮ ಮೇಲೆ ಬಿದ್ದು, ಮುಂಜಾವಿನ ಚಳಿಯ ಅರ್ಭಟವನ್ನ ಸ್ವಲ್ಪ ಕಮ್ಮಿ ಮಾಡಿದ್ದವು.
ಮುಂಜಾವಿನ ಮಂಜು ಕರಗಿ ಈಗ ತಿಳಿನೀರಿನ ಕೆರೆ ಸ್ಪಷ್ಟವಾಗಿ ಕಾಣತೊಡಗಿತ್ತು.
'ಮೀನುಗಳು' - ದಡದ ಹತ್ತಿರದಲ್ಲಿ ಕಾಣುತ್ತಿದ್ದ ಕೆಲವು ಸಣ್ಣ ಮೀನುಗಳನ್ನು ತೋರುತ್ತ ಮತ್ತೇ ನಾನು ಗೇಮ್ ನಲ್ಲಿ ವಾಪಾಸಾದೆ.
'ಟ್ಯಾಡ್-ಪೋಲ್ಸ್ '- ಬಾಲಗಳುಳ್ಳ ಕಪ್ಪೆಗಳನ್ನ ತೋರುತ್ತ ವಿಹಾನ ಹೇಳಿದಳು
'ಗಣಪತಿ' ಅಂತ ಕೊನೆ ಮಗಳು ಕೆರೆಯನ್ನ ತೋರಿಸುತ್ತ ಹೇಳಿದಲು.
'ಗಣಪತಿ'!? ..... ಎಲ್ಲಿ ... ನಾನು ಕೇಳಿದೆ.
'ಗಣಪತಿ' ನಾವು ಇಲ್ಲೇ ತಾನೆ ಮನೆಗೆ ಕಳಿಸಿದ್ದು ? ನೀನೇ ಹೇಳಿದ್ಯಲ್ಲಾ......ಇಲ್ಲಿಂದ ಗಣಪತಿ ನೇರವಾಗಿ ಕೈಲಾಸಕ್ಕೆ , ಮನೆಗೆ ಹೋಗುತ್ತಾನೆಂದು, ಅಂತ ವಿಹಾನಾ ಗಣಪತಿ ವಿಸರ್ಜನೆ ನೆನಪಿಸಿಕೊಂಡು ಹೇಳಿದಳು. ಅಷ್ಟರಲ್ಲಿ -
'ಆರ್ ಯು ದೇರ್ ಗಣಪತಿ? ಆಯ್ ಲವ್ ಯು ಗಣಪತಿ, ಕಮ್ ಅಪ್' ಅಂತ ಕೊನೆ ಮಗಳು ಉದ್ಘಾರ ತಗೆದಳು, ಅದಕ್ಕೆ ಹಿರಿ ಮಗಳು ರಾಗ ಸೇರಿಸಿದಳು. ನಾನು ಮನಸಲ್ಲೇ ಗಜಾನನನ್ನ ನೆನಸಿಕೊಂಡೆ. ಅಷ್ಟರಲ್ಲಿ ಬಾನಲ್ಲಿ ಹಾರಾಡುತ್ತಿದ್ದ ಕಪ್ಪಗಿನ ಹಕ್ಕಿಯೊಂದು ಕೆರೆಯ ನೀರಿನ ಮೇಲೆ ಲ್ಯಾಂಡ್ ಆಗಿ ಈಜಾಡತೊಡಗಿತು, ನೋಡತ್ತಿದ್ದಂತೆ ಕೊಕ್ಕು-ಕತ್ತನ್ನು ನೀರಲ್ಲಿ ಮುಳುಗಿಸಿ , ನೀರಲ್ಲಿ ಮಾಯವಾಯಿತು. ಗಣಪತಿಯ ನೆನಪಲ್ಲಿದ್ದ ಭಕ್ತೆಯರು ಮತ್ತೇ ಗೇಮನಲ್ಲಿ ವಾಪಸಾದರು.
'A bird which can fly , as well smim also, and then dive inside the water' ಅಂತ ಹಿರಿಮಗಳು ಹೇಳಿದಳು.
ಅದರ ಹೆಸರು 'Cormorant' ನೀರು ಕಾಗೆ ಅನ್ನುತ್ತಾರೆ ಅಂತ ನಾನಂದೆ. ಎಲ್ಲರೂ ಅದು ಒಂದು ಕಡೆ ಮುಳುಗಿ ಬೇರೆಕಡೆ ಪ್ರತ್ಯಕ್ಷವಾಗುದನ್ನ ವಿಸ್ಮಯದಿಂದ ನೋಡುತ್ತ, ಪ್ರತಿಯೊಂದುಸಾರಿ ಅದು ನೀರಲ್ಲಿ ಕಾಣೆಯಾದಾಗ, ಎಲ್ಲಿ ಪ್ರತ್ಯಕ್ಷವಾಗುಬಹುದೆಂಬ ಊಹಿಸುವ ಗೇಮ್ - ಉಪಪಂದ್ಯವಾಗಿ ಆಡತೊಡಗಿದೆವು. ಆ ನೀರು ಕಾಗೆ ನಮಗೆ ಚಳ್ಳೆಹಣ್ಣು ತಿನ್ನಿಸುತ್ತ ನಾವು ಊಹಿಸಲೂ ಸಾಧ್ಯವಾಗದಂತ ಸ್ಥಳದಿಂದ ಪ್ರತ್ಯಕ್ಷವಾಗುತ್ತಿತ್ತು.
'A Blue Bird' ಅಂತ ಕೊನೆಮಗಳು ಅನತಿ ದೂರದಲ್ಲಿ, ಕೆರಯಲ್ಲೇ ಇದ್ದ ಒಂದು ಕಲ್ಲಿನ ಮೇಲೆ ಕುಳಿತ 'kingfisher' ಹಕ್ಕಿಯನ್ನ ತೋರಿಸುತ್ತ ಹೇಳಿದಳು. ಕಿಂಗ್ ಪಿಶರ್ ಸಣ್ಣ ಸಣ್ಣ ಮೀನು ಹಿಡಿಯಲು ಪ್ರಯತ್ನ ಮಾಡುತ್ತಿತ್ತು.
ಹೆಸರು ಕಿಂಗ್-ಪಿಶರ್ ಅಂತ ಇದೆ ಆದರೂ ಅದಕ್ಕೆ ಮೀನು ಸಿಗುತ್ತಿಲ್ಲ ಅಂತ ಹಿರಿಮಗಳು ಬೇಸರಿಸಿದಳು. ಸೂರ್ಯ ಈಗ ಸ್ವಲ್ಪ ಮೇಲೆ ಬಂದಿದ್ದ. ಮನೆಗೆ ತಿರುಗಿ ಹೋಗುವ ಸಮಯವಾಗಿತ್ತು. ನಾನು ಇಬ್ಬರನ್ನೂ ಕೂತಲ್ಲಿಂದ ಎಬ್ಬಿಸಿದೆ.
ಗೇಮ್ ಇನ್ನೂ ಮುಗಿದಿಲ್ಲ ಅಪ್ಪಾ ... ಅಂತ ಹಿರಿಮಗಳು ಎದ್ದು ನಿಂತು ಹೇಳಿದಳು. ನಾನು ಮತ್ತೇನು ಹೇಳುತ್ತಾಳೆಂದು ಯೋಚಿಸತೊಡಗಿದೆ. ಅವಳು ಒಂದು ಸಣ್ಣ ಕಲ್ಲನ್ನು ತೆಗೆದುಕೊಂಡು ಪ್ರಶಾಂತವಾದ ಕೆರಯತ್ತ ಎಸೆದು -
'Waves' ಅಂತ ನಗುತ್ತಾ ಹೇಳಿದಳು.
ನೀನೇ 'ವಿನ್ನರ್' ಅಂತ ನಾನಂದೆ.
ಸೋಲೊಪ್ಪದ ಕಿರಿಮಗಳು ಹೇಳಿದಳು - "ವಿಹಾನಾ ಕಲ್ಲು ತೂರಿದ್ದಾಳಲ್ಲ, ಅದು ಮಲಗಿದ್ದ ಗಣಪತಿಯನ್ನೆಬ್ಬಿಸಿ, ಗಣಪತಿ ಜಂಪ್ ಮಾಡಿ ಗುಡ್ಡದ ಮೇಲೆ ನಿಲ್ಲುತ್ತೆ" ಅಂತ ಮುಗ್ಧವಾಗಿ ಹೇಳಿದಾಗ, ನಾನು 'ನೀನು ದೊಡ್ಡ ವಿನ್ನರ್' ಅಂತ ಹೇಳಿ, ಗಣಪತಿ ಬೇರೆ ಊರಿಗೆ ಹೋಗಿದೆಯೆಂದು, ಬರಲು ತಡವಾಗುತ್ತೆ ಅಂತ ಸಮಜಾಯಿಷಿ ಕೊಟ್ಟು ಮನೆಗೆ ಕರೆದುಕೊಂಡು ಬಂದೆ. ಮನದಲ್ಲಿ ಕೆಳಗಿನ ಹೇಳಿಕೆ ನೆನಪಾಯಿತು -
"Spend your time in the company of geniuses, sages, children, and books." - Naval Ravikant .
